ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟ; ಇಂಡಿಯನ್ ಮುಜಾಹಿದೀನ್ ಸದಸ್ಯೆ ನಿಖಿತಾ ಸೆರೆ
(Woman with IM link | fake herbal products | Indian Mujahideen | Nikita)
ಇಂಡಿಯನ್ ಮುಜಾಹಿದೀನ್ ಸದಸ್ಯೆ ಎಂದು ಹೇಳಲಾಗಿರುವ 28ರ ಹರೆಯದ ನಿಖಿತಾ ಎಂಬಾಕೆಯನ್ನು ನಕಲಿ ವನಸ್ಪತಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಇತರ ನಾಲ್ವರು ಆಫ್ರಿಕನ್ ಪ್ರಜೆಗಳೊಂದಿಗೆ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪುಣೆ ಸ್ಫೋಟದ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.
ಇಂಡಿಯನ್ ಮುಜಾಹಿದೀನ್ ಸದಸ್ಯೆ ಈಕೆಯೆಂದು ಆರೋಪಿಸಲಾಗಿದ್ದು, ಅಮೆರಿಕನ್ ಸೆಂಟರ್ ದಾಳಿ ನಡೆಸಿದ್ದ ಅಫ್ತಾಬ್ ಅನ್ಸಾರಿ ಸಹಚರೆ ಎಂದು ಹೇಳಲಾಗಿದೆ. ಈಕೆ ಆರು ವರ್ಷಗಳ ಕಾಲ ಜೈಲಿನಲ್ಲಿದ್ದು, 2008ರಲ್ಲಿ ಬಿಡುಗಡೆಯಾಗಿದ್ದಳು.
ಇಂಟರ್ನೆಟ್ ಮೂಲಕ ನಕಲಿ ಗಿಡಮೂಲಿಕಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಈಕೆಯನ್ನು ದಕ್ಷಿಣ ದೆಹಲಿಯ ಜೋರ್ ಬಾಗ್ ಮಾರುಕಟ್ಟೆ ಪ್ರದೇಶದಿಂದ ಶುಕ್ರವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪುಣೆ ಭಯೋತ್ಪಾದಕ ದಾಳಿ ಬಗ್ಗೆ ಆಕೆಯಲ್ಲಿ ಮಾಹಿತಿಗಳು ಲಭ್ಯವಿದೆಯೇ ಎಂಬುದರ ಕುರಿತು ತನಿಖಾ ದಳಗಳು ಇದೀಗ ಆಕೆಯನ್ನು ವಿಚಾರಣೆಗೊಳಪಡಿಸುತ್ತಿವೆ.
ನೈಜೀರಿಯಾ ಪ್ರಜೆಗಳಾದ ರಿಚರ್ಡ್ ಈಗೆನೆಸ್ (36), ಟಾಮಿ ಒಜೇಗಾ (38), ಅರೋನ್ (34) ಹಾಗೂ ಐವೋರಿ ಕೋಸ್ಟ್‌ನ ಲೂಸಿನ್ (35) ಎಂಬವರನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಸಿಲ್ಪಿಯಂ ತೆರೆಬಿಂತಿನಟೆಮ್' ಎಂಬ ನಕಲಿ ಗಿಡಮೂಲಿಕೆ ಬೀಜಗಳು, ಹಲವು ಔಷಧಿ ಕಂಪನಿಗಳ ನಕಲಿ ಬ್ಯುಸಿನೆಸ್ ಕಾರ್ಡ್‌ಗಳು, ಮೂರು ಲ್ಯಾಪ್‌ಟಾಪ್‌ಗಳು, ಹಲವು ದೇಶಗಳ ಸಿಮ್ ಕಾರ್ಡ್‌ಗಳು ಮತ್ತು ನಾಲ್ಕು ಪಾಸ್‌ಪೋರ್ಟ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಕೊಲ್ಕತ್ತಾ ನಿವಾಸಿಗಳಾದ ಅನ್ಸಾರಿ ಮತ್ತು ನಿಖಿತಾ ಇಬ್ಬರೂ ಅಮೆರಿಕನ್ ಸೆಂಟರ್ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾದವರು. 2001ರಲ್ಲಿ ಜೈಲಿಗೆ ಹೋಗಿದ್ದ ನಿಖಿತಾ ಆರೂವರೆ ವರ್ಷಗಳ ಕಾಲ ಸೆರೆಮನೆಯಲ್ಲಿದ್ದು 2008ರಲ್ಲಿ ಬಿಡುಗಡೆಯಾಗಿದ್ದಳು. ತಪ್ಪಿತಸ್ಥ ಎಂದು ಸಾಬೀತಾಗಿರುವ ಅನ್ಸಾರಿ ಮರಣದಂಡನೆ ಎದುರಿಸುತ್ತಿದ್ದಾನೆ.
ನ್ಯಾಯಾಲಯದಲ್ಲಿ ಆಫ್ರಿಕನ್ ಪ್ರಜೆಗಳನ್ನು ಭೇಟಿಯಾಗಿದ್ದ ಆಕೆ ಜೈಲಿನಿಂದ ಬಿಡುಗಡೆಯಾದ ನಂತರ ಕಳೆದ 18 ತಿಂಗಳುಗಳಿಂದ ಅವರ ಜತೆಗೆ ವಾಸಿಸುತ್ತಿದ್ದಾಳೆ. ಹಲವು ವಂಚನೆ ಪ್ರಕರಣಗಳಲ್ಲಿ ಆಕೆ ಭಾಗಿಯಾಗಿರುವ ದಾಖಲೆಗಳನ್ನು ಹೊಂದಿದ್ದಾಳೆ. ಮಿಸೆಸ್ ಖನ್ನಾ, ಮಿಸೆಸ್ ನಿಶಾ ಮುಂತಾದ ಹೆಸರುಗಳನ್ನೂ ಆಕೆ ಬಳಸುತ್ತಾಳೆ ಎಂದು ಪೊಲೀಸ್ ಅಧಿಕಾರಿ ವಿವರಣೆ ನೀಡಿದ್ದಾರೆ.
ಕೊಲ್ಕತ್ತಾದ ಲೊರೆಟೋ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ನಿಖಿತಾ ಇಂಗ್ಲೀಷ್ ಭಾಷೆಯಲ್ಲಿ ಭಾರೀ ಹಿಡಿತ ಹೊಂದಿದ್ದಾಳೆ. ಪಾಟಿಯಾಲಾ ಹೌಸ್ ಕೋರ್ಟ್‌ಗಳ ನ್ಯಾಯವಾದಿಗಳ ಜತೆ ಕೂಡ ಆಕೆ ಕೆಲಸ ಮಾಡಿದ್ದಾಳೆ.