ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ವಿವಾದ; ಆತ್ಮಾಹುತಿ ಯತ್ನ, ಹೈದರಾಬಾದ್ ಉದ್ವಿಗ್ನ
(students rally | Telangana | Osmania University | Andra Pradesh)
ತೆಲಂಗಾಣ ಪ್ರತ್ಯೇಕ ರಾಜ್ಯ ವಿವಾದ ಮತ್ತೆ ತಾರಕಕ್ಕೇರುತ್ತಿದ್ದು, ಆಂಧ್ರಪ್ರದೇಶ ವಿಧಾನಸಭೆಗೆ ಮುತ್ತಿಗೆ ಹಾಕಲೆತ್ನಿಸಿದ ಉಸ್ಮಾನಿಯಾ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಹಾಗೂ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಸದಸ್ಯರನ್ನು ಭದ್ರತಾ ಪಡೆಗಳು ತಡೆಯುತ್ತಿದ್ದಂತೆ ಹೈದರಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ವಿದ್ಯಾರ್ಥಿಯೊಬ್ಬ ಆತ್ಮಾಹುತಿಗೆ ಯತ್ನಿಸಿದ ಬಗ್ಗೆಯೂ ವರದಿಯಾಗಿದೆ.
ಇಂದು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ರೋಸಯ್ಯನವರು ಬಜೆಟ್ ಮಂಡಿಸುತ್ತಿದ್ದು, ಇದನ್ನು ವಿರೋಧಿಸಿ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಧಾನಸಭೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ರ‌್ಯಾಲಿಯಲ್ಲಿ ಹೊರಟಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಅಲ್ಲಲ್ಲಿ ಪೊಲೀಸರು ತಡೆಯಲಾರಂಭಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಲಾಠಿಚಾರ್ಜ್ ಕೂಡ ನಡೆದಿದೆ. ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಗರದ ಪರಿಸ್ಥಿತಿ ಸಂಪೂರ್ಣ ಉದ್ವಿಗ್ನತೆಯಿಂದ ಕೂಡಿದೆ ಎಂದು ವರದಿಗಳು ಹೇಳಿವೆ.
ಜೈ ತೆಲಂಗಾಣ ಎಂದು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ವಿಧಾನಸಭೆಗೆ ಮುತ್ತಿಗೆ ಹಾಕಿ ವಶಕ್ಕೆ ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದರು ಎಂದು ಹೇಳಲಾಗಿದ್ದು, ಇದನ್ನು ಮನಗಂಡ ಪೊಲೀಸರು ವಿಧಾನಸಭೆಯ ಸುತ್ತ ಭಾರೀ ಭದ್ರತೆಯನ್ನು ನಿಯೋಜಿಸಿದ್ದರು.
ವಿದ್ಯಾರ್ಥಿಗಳ ರ‌್ಯಾಲಿಯ ಪ್ರಭಾವವನ್ನು ಕುಗ್ಗಿಸಲು ರೈಲು, ಬಸ್ಸುಗಳ ಸೇವೆಯನ್ನೂ ರದ್ದುಗೊಳಿಸಲಾಗಿತ್ತು. ಆದರೂ ಸಾವಿರಾರು ವಿದ್ಯಾರ್ಥಿಗಳು ತೀವ್ರ ಆಕ್ರೋಶದಿಂದಲೇ ರ‌್ಯಾಲಿಯನ್ನು ಆರಂಭಿಸಿದ್ದರು. ತೆಲಂಗಾಣ ಪ್ರಾಂತ್ಯದ ಎಲ್ಲಾ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳು ಮತ್ತು ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ಆಗ್ರಹಿಸುತ್ತಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮತ್ತು ಅಖಂಡ ಆಂಧ್ರಪ್ರದೇಶ ಕುರಿತಂತೆ ಕೇಂದ್ರ ಸರಕಾರ ರಚಿಸಿದ್ದ ಶ್ರೀಕೃಷ್ಣ ಸಮಿತಿಯನ್ನು ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಮತ್ತು ಉಸ್ಮಾನಿಯಾ ಯುನಿವರ್ಸಿಟಿ ತೀವ್ರವಾಗಿ ವಿರೋಧಿಸಿತ್ತು.
ವಿದ್ಯಾರ್ಥಿ ಆತ್ಮಾಹುತಿ ಯತ್ನ... ರ‌್ಯಾಲಿ ಸಾಗುತ್ತಿದ್ದಂತೆ ವಿದ್ಯಾರ್ಥಿಯೊಬ್ಬ ಮೈಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಕಿಯಲ್ಲಿ ದೇಹ ಕರಗುತ್ತಿದ್ದರೂ ಎದೆಗುಂದದೆ ನೋವನ್ನು ನುಂಗಿಕೊಂಡು ತೆಲಂಗಾಣ ಪರ ಘೋಷಣೆಗಳನ್ನು ಕೂಗುತ್ತಾ ಭದ್ರತಾ ಪಡೆಗಳ ಕೈಗೂ ಸಿಗದೆ ವಿದ್ಯಾರ್ಥಿ ಓಡಿ ಹೋಗುತ್ತಿದ್ದ.
ಕೊನೆಗೂ ಆತನನ್ನು ಭದ್ರತಾ ಪಡೆಗಳು ಹಿಡಿದು ಬೆಂಕಿ ನಂದಿಸಿದ್ದು, ತೀವ್ರ ಸುಟ್ಟ ಗಾಯಗಳೊಂದಿಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾದಯ್ಯ ಎಂದು ಗುರುತಿಸಲಾಗಿದೆ.
ರಾಜೀನಾಮೆ ತಿರಸ್ಕೃತ... ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಮತ್ತು ವಿಜಯಶಾಂತಿಯವರು ತಮ್ಮ ಶಾಸಕ ಸ್ಥಾನಗಳಿಗೆ ನೀಡಿದ್ದ ರಾಜೀನಾಮೆಯನ್ನು ಆಂಧ್ರಪ್ರದೇಶ ಸ್ಪೀಕರ್ ತಿರಸ್ಕರಿಸಿದ್ದಾರೆ.
ರಾಜೀನಾಮೆ ಪತ್ರವು ನಿಯಮಬದ್ಧವಾಗಿಲ್ಲ. ಹಾಗಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಟಿಆರ್ಎಸ್‌ನ ಎಲ್ಲಾ ಶಾಸಕರು ರಾಜೀನಾಮೆ ಸಲ್ಲಿಸಿದ್ದರು.