ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಖ್ ಯುವಕರಿಗೂ ಕ್ಷಮಾದಾನ ನೀಡಲು ಕೇಂದ್ರ ಸಿದ್ಧ: ಚಿದಂಬರಂ
(Sikh youths | Kashmiri militants | P Chidambaram | Khalistan)
ಸಿಖ್ ಯುವಕರಿಗೂ ಕ್ಷಮಾದಾನ ನೀಡಲು ಕೇಂದ್ರ ಸಿದ್ಧ: ಚಿದಂಬರಂ
ಅತ್ತಾರಿ, ಶನಿವಾರ, 20 ಫೆಬ್ರವರಿ 2010( 18:48 IST )
ಪ್ರತ್ಯೇಕ ರಾಷ್ಟ್ರಕ್ಕಾಗಿ ಹಿಂಸಾಚಾರ ನಡೆಸಿ ನಂತರ ವಿದೇಶಗಳಲ್ಲಿ ರಾಜಕೀಯ ನೆಲೆ ಪಡೆದುಕೊಂಡಿರುವ ಸಿಖ್ ಯುವಕರಿಗೆ ಕ್ಷಮಾದಾನ ನೀಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಕಾಶ್ಮೀರಿ ಉಗ್ರರ ಮರಳುವಿಕೆಗೆ ಸ್ವಾಗತ ಕೋರಿದ ನಂತರ ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಭಯೋತ್ಪಾದನೆಯನ್ನು ತ್ಯಜಿಸುವುದಾದರೆ, ಹಿಂಸಾಚಾರವನ್ನು ನಿಲ್ಲಿಸುವುದಾದರೆ ಮತ್ತು ಖಾಲಿಸ್ತಾನ ಬೇಡಿಕೆಯನ್ನು ಕೈ ಬಿಡುವುದಾದರೆ ಸಿಖ್ ಯುವಕರು ಭಾರತಕ್ಕೆ ವಾಪಸಾಗಬಹುದು. ಅವರ ಮರಳುವಿಕೆಗೆ ಖಂಡಿತಾ ನಮ್ಮ ಸ್ವಾಗತವಿದೆ ಎಂದು ಶನಿವಾರ ಪಂಜಾಬ್‌ನಲ್ಲಿ ಮಾತನಾಡುತ್ತಾ ಸಚಿವರು ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭಯೋತ್ಪಾದನೆ ಕಾರಣದಿಂದ ವಲಸೆ ಹೋಗಿದ್ದ ಕಾಶ್ಮೀರಿ ಉಗ್ರರು ಹಿಂಸಾಚಾರ ತ್ಯಜಿಸುವುದಾದರೆ ಭಾರತಕ್ಕೆ ಮರಳಬಹುದು ಎಂಬ ಪ್ರಸ್ತಾವನೆಯನ್ನು ಎಂದು ಕೇಂದ್ರ ಮುಂದಿಟ್ಟಿದೆ. ಆದರೆ ಇದರಿಂದ ಸಿಖ್ ಯುವಕರನ್ನು ಹೊರಗಿಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹೇಳಿಕೆಯ ಎರಡು ದಿನಗಳ ನಂತರ ಪ್ರತಿಕ್ರಿಯಿಸಿರುವ ಚಿದಂಬರಂ, ಹಿಂಸಾಚಾರ ತ್ಯಜಿಸಿದರೆ ಅವರೂ ವಾಪಸಾಗಬಹುದು ಎಂದಿದ್ದಾರೆ.
ಪಂಜಾಬ್ ಸರಕಾರವು ಇಂತಹ ಒಂದು ಯೋಜನೆಯನ್ನು ಜಾರಿಗೊಳಿಸಲು ಸಿದ್ಧವಿರುವುದಾದರೆ, ಅದನ್ನು ಪರಿಗಣಿಸಲು ನಾನು ತುಂಬಾ ಸಂತೋಷಪಡುತ್ತೇನೆ ಎಂದು ಗೃಹಸಚಿವರು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿನ ಜನರಿಗೆ ಸುಲಭ ಸಂಚಾರ, ಸರಕು ಸಾಗಣೆ ಮತ್ತು ಸಂಚಾರಗಳಿಗಾಗಿ ಹೆಚ್ಚಿನ ವ್ಯವಸ್ಥೆಗಳನ್ನು ಒದಗಿಸುವ ದೇಶದ ಮೊದಲ ಸಂಯೋಜಿತ ಚೆಕ್ ಪೋಸ್ಟ್ ಸ್ಥಾಪನೆಗೆ ಅಡಿಗಲ್ಲು ಹಾಕಿದ ನಂತರ ಅವರು ಮಾತನಾಡುತ್ತಿದ್ದರು.
ದೇಶವೇ ಒಗ್ಗಟ್ಟಿನಿಂದಿರುವ ಸಂದರ್ಭದಲ್ಲಿ ಹಿಂಸಾಚಾರವನ್ನು ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ಬಯಸುವ ಸಿಖ್ ಯುವಕರಿಗೆ ಸರ್ವೇಸಾಮಾನ್ಯವಾದ ಕ್ಷಮಾದಾನ ನೀಡಲು ಏನು ಸಮಸ್ಯೆ ಎಂದು ಬಾದಲ್ ಪ್ರಶ್ನಿಸಿದ್ದರು.