ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂಡಿಯನ್ ಮುಜಾಹಿದೀನ್ ಮೇಲೆ ನಿಷೇಧವಿಲ್ಲ: ಕೇಂದ್ರ ಸ್ಪಷ್ಟನೆ (Central govt, Indian Mujahideen, IM, German Bakery, Pune blast, G K Pillai, India)
Bookmark and Share Feedback Print
 
ಹನ್ನೆರಡು ಅಮಾಯಕರ ಸಾವಿಗೆ ಕಾರಣವಾದ ಪುಣೆ ಜರ್ಮನ್ ಬೇಕರಿ ಸ್ಫೋಟದ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಮೇಲೆ ನಿಷೇಧ ಹೇರಲಾಗುತ್ತದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಸರಕಾರ, ನಿಷೇಧದ ಕುರಿತು ನಾವು ಇದುವರೆಗೂ ಪರಿಗಣಿಸಿಲ್ಲ ಎಂದಿದೆ.

ಇಂಡಿಯನ್ ಮುಜಾಹಿದೀನ್ ನಿಷೇಧವನ್ನು ಸರಕಾರ ಪರಿಗಣಿಸಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ವಾರ್ತಾವಾಹಿನಿಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

2007ರ ನವೆಂಬರ್ 23ರಂದು ಉತ್ತರ ಪ್ರದೇಶದಲ್ಲಿ ಸರಣಿ ಸ್ಫೋಟ, 2008ರ ಮೇ 13ರ ಜೈಪುರ ಸ್ಫೋಟ, ಅದೇ ವರ್ಷದ ಜುಲೈ 25ರಂದು ಬೆಂಗಳೂರು ಮತ್ತು ಮರುದಿನ ಅಹಮದಾಬಾದ್ ಸರಣಿ ಸ್ಫೋಟ, 2008ರ ಸೆಪ್ಟೆಂಬರ್ 13ರಂದು ದೆಹಲಿ ಸರಣಿ ಸ್ಫೋಟ ಮತ್ತು ಇದೀಗ ಫೆಬ್ರವರಿ 13ರ ಪುಣೆ ಸ್ಫೋಟ ಆರೋಪಗಳನ್ನು ಇಂಡಿಯನ್ ಮುಜಾಹಿದೀನ್ ಹೊತ್ತುಕೊಂಡಿದ್ದರೂ ಈ ಸಂಘಟನೆ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರ ನಿರಾಕರಿಸಿದೆ.

ಆದರೆ ಇದು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಸಿಮಿ, ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ (ಹುಜಿ) ಭಾಗವಾಗಿರುವುದರಿಂದ ಪ್ರತ್ಯೇಕ ನಿಷೇಧ ಹೇರುವುದು ಅನಗತ್ಯ ಎಂಬುದು ಕೇಂದ್ರದ ವಾದ. ಉತ್ತರ ಪ್ರದೇಶ ಸ್ಫೋಟದ ನಂತರ ನಿಷೇಧಕ್ಕೆ ಒತ್ತಾಯಗಳು ಬರತೊಡಗಿದಾಗ ಕೇಂದ್ರ ನೀಡಿದ್ದ ಪ್ರತಿಕ್ರಿಯೆಯಿದು.

ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಅಜಿತ್ ದೋವಲ್ ಪ್ರಕಾರ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ನಿಷೇಧಕ್ಕೆ ಅರ್ಹವಾಗಿದೆ. ಕಾನೂನು ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ಈ ಕಾಯ್ದೆಯಡಿಯಲ್ಲಿ ಅದನ್ನು ನಿಷೇಧಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಪುಣೆ ಸ್ಫೋಟ ತನಿಖೆಯನ್ನು ಉಗ್ರ ನಿಗ್ರಹ ದಳದಿಂದ (ಎಟಿಎಸ್) ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಹಸ್ತಾಂತರಿಸುವ ಕುರಿತು ಕೂಡ ಸರಕಾರ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಪಿಳ್ಳೈ ತಿಳಿಸಿದ್ದಾರೆ.

ಆರಂಭದಲ್ಲಿ ಈ ಪ್ರಕರಣದಲ್ಲಿ ವಿದೇಶಿ ಕೈವಾಡವನ್ನು ತಳ್ಳಿ ಹಾಕಿದ್ದ ಪಿಳ್ಳೈ, ನಂತರ ಪಾಕಿಸ್ತಾನದ ಕರಾಚಿ ಪ್ರೊಜೆಕ್ಟ್ ನೆರಳು ಇದರಲ್ಲಿದೆ, ಡೇವಿಡ್ ಕೊಲ್ಮನ್ ಹೆಡ್ಲಿಯ ಪಿತೂರಿಯೂ ಇದರಲ್ಲಿದೆ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ