ಪ್ರಣಯದಾಟದ ವೀಡಿಯೋ ತುಣುಕೊಂದನ್ನು ಸಹಪಾಠಿಯೊಬ್ಬ ಇಂಟರ್ನೆಟ್‌ನಲ್ಲಿ ಪೋಸ್ಟ್ ಮಾಡಿದ ನಂತರ ಬೆದರಿದ 18ರ ಹರೆಯದ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಕೇರಳದಿಂದ ವರದಿಯಾಗಿದೆ.
ಕಣ್ಣೂರಿನಲ್ಲಿನ ತಾಲಿಂಪರಂಬಾ ಸಮೀಪದ ನೆಲ್ಲಿಪರಂಬಿಲ್ ಎಂಬಲ್ಲಿನ ಮೊರಾಳ್ ಸೆಕಂಡರಿ ಸ್ಕೂಲ್ ದ್ವಿತೀಯ ಪಿಯುಸಿ 19ರ ಹರೆಯದ ವಿದ್ಯಾರ್ಥಿನಿ ಪ್ರತಿಭಾ ಮತ್ತು ಆಕೆಯ ಈಗಿನ ಪ್ರಿಯಕರ ಎಂದು ಹೇಳಲಾಗಿರುವ 27ರ ಹರೆಯದ ಪಿ.ಪಿ. ದಿನೇಶ್ ಎಂಬ ಎಲೆಕ್ಟ್ರಿಷಿಯನ್ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಹುಡುಗಿಯ ಮನೆಯ ಪಕ್ಕದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.
ಕಳೆದೆರಡು ತಿಂಗಳುಗಳಿಂದ ಪ್ರತಿಭಾ ಮತ್ತು ಆಕೆಯ ಸಹಪಾಠಿ ಡಿ.ಆರ್. ಅರುಣ್ ಸರಸ-ಸಲ್ಲಾಪದ ವೀಡಿಯೋಗಳು ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳಲ್ಲಿ ರಾರಾಜಿಸುತ್ತಿದ್ದವು. ಇದೇ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಕಾಲೇಜಿನಿಂದ ವಜಾಗೊಳಿಸಲಾಗಿತ್ತು.
ಕೆಲವು ಸಮಯದ ಹಿಂದೆ ಹುಡುಗಿ ತನ್ನ ಸಹಪಾಠಿ 20ರ ಹರೆಯದ ಅರುಣ್ ಜತೆ ರೋಮ್ಯಾನ್ಸ್ ನಡೆಸುತ್ತಿದ್ದಾಗ ಸ್ವತಃ ಆತನೇ ಅದನ್ನು ತನ್ನ ಮೊಬೈಲ್ ಫೋನಿನಿಂದ ಚಿತ್ರೀಕರಣ ನಡೆಸಿದ್ದ. ಅಷ್ಟಕ್ಕೇ ತನ್ನ ವಿಕೃತಿಯನ್ನು ಬಿಡದ ಸಹಪಾಠಿ ಅದನ್ನು ಇಂಟರ್ನೆಟ್‌ನಲ್ಲೂ ಪ್ರಕಟಿಸಿದ್ದ. ಅಲ್ಲದೆ ಎಂಎಂಎಸ್ ಮೂಲಕವೂ ಇದು ವ್ಯಾಪಕವಾಗಿ ಹರಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿನ ಹೆತ್ತವರ-ಶಿಕ್ಷಕರ ಸಂಘಟನೆ ದೂರು ನೀಡಿದ ನಂತರ, ತನ್ನ ಮೊಬೈಲ್‌ನಿಂದ ಸಿಡಿಗೆ ಕಾಪಿ ಮಾಡಲು ಸೈಬರ್ ಕೆಫೆಗೆ ಹೋಗಿದ್ದ ಈ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಸಹಕಾರ ನೀಡಿದ ಇತರ ವಿದ್ಯಾರ್ಥಿಗಳು ಹಾಗೂ ಸೈಬರ್ ಕೆಫೆಯ ಸಿಬ್ಬಂದಿಗಳನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಆಕ್ರೋಶಗೊಂಡಿದ್ದ ಸ್ಥಳೀಯರು ಸೈಬರ್ ಕೆಫೆಗೆ ದಾಳಿ ನಡೆಸಿದ್ದರು.
ಹಿಂದಿನ ದಿನ ಮಗಳು ನಾಪತ್ತೆಯಾಗಿದ್ದ ಕುರಿತು ಪ್ರತಿಭಾಳ ಕುಟುಂಬ ಗಾಬರಿಗೊಳಗಾಗಿತ್ತು. ರಾತ್ರಿಯಿಂದಲೇ ಆಕೆ ಕಾಣೆಯಾಗಿದ್ದಳು. ಆದರೆ ಬೆಳಗ್ಗಿನ ಹೊತ್ತಿಗೆ ಅವರಿಬ್ಬರ ಶವಗಳೂ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹುಡುಗಿ ವಿವಾಹಿತ ಹಿಂದೂ ಸ್ತ್ರೀಯಂತೆ ವಸ್ತ್ರಾಭರಣ ಭೂಷಿತೆಯಾಗಿದ್ದಳು. ಹಣೆಗೆ ಕುಂಕುಮ ಹಾಗೂ ಮಂಗಳಸೂತ್ರವನ್ನು ಧರಿಸಿದ್ದಳು ಎಂದು ಮೂಲಗಳು ಹೇಳಿವೆ.