ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆತ್ಯಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು; ತೆಲಂಗಾಣ ಉದ್ವಿಗ್ನ
(Telangana | self-immolation | Siripur Yadaiah | Osmania University)
ಆತ್ಯಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು; ತೆಲಂಗಾಣ ಉದ್ವಿಗ್ನ
ಹೈದರಾಬಾದ್, ಭಾನುವಾರ, 21 ಫೆಬ್ರವರಿ 2010( 11:43 IST )
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ ಸದಸ್ಯರು ನಡೆಸುತ್ತಿದ್ದ ರ‌್ಯಾಲಿ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಭಾನುವಾರ ಮುಂಜಾನೆ ಸಾವನ್ನಪ್ಪಿದ್ದು, ತೆಲಂಗಾಣ ಪ್ರಾಂತ್ಯದಲ್ಲಿನ ಉದ್ನಿಗ್ನತೆ ದ್ವಿಗುಣಗೊಂಡಿದೆ.
ಆಂಧ್ರಪ್ರದೇಶದ ರಂಗಾ ರೆಡ್ಡಿ ಜಿಲ್ಲೆಯ ನಗರಂ ಗ್ರಾಮದ ಸಿರಿಪುರ್ ಯಾದಯ್ಯ ಎಂಬ 19ರ ಹರೆಯದ ವಿದ್ಯಾರ್ಥಿ ಉಸ್ಮಾನಿಯ ಯುನಿವರ್ಸಿಟಿಯ ಪ್ರತಿಭಟನೆಗೆಂದು ಆಗಮಿಸಿದ್ದ. ಈ ಸಂದರ್ಭದಲ್ಲಿ ಮೈಗೆ ಪೆಟ್ರೋಲ್ ಸುರಿದು ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
PR
ಮೈಯೆಲ್ಲಾ ಸುಡುತ್ತಿರುವುದನ್ನೂ ಲೆಕ್ಕಿಸದೆ ಓಡುತ್ತಾ ತಪ್ಪಿಸಿಕೊಳ್ಳುತ್ತಿದ್ದ ಆತನನ್ನು ಪೊಲೀಸರು ಸ್ವಲ್ಪ ಹೊತ್ತಿನ ನಂತರ ತಡೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಶನಿವಾರ ನಡುರಾತ್ರಿಯ ಬಳಿಕ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ತನ್ನ ಜತೆಗಿದ್ದ ಬ್ಯಾಗಿನಲ್ಲಿ ಆತ್ಮಹತ್ಯಾ ಚೀಟಿಯನ್ನು ಬರೆದಿಟ್ಟಿದ್ದು, ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಸ್ಥಾಪನೆಯಾದರೆ ನನ್ನಂತಹ ಜನರಿಗೆ ಕೆಲಸಗಳು ಸಿಗಬಹುದು. ನಾನು ನನ್ನ ಪ್ರಾಣವನ್ನು ತೆಲಂಗಾಣಕ್ಕಾಗಿ ಅರ್ಪಿಸುತ್ತಿದ್ದೇನೆ. ದಯವಿಟ್ಟು ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನ ಸಿಗುವವರೆಗೆ ಚಳುವಳಿಯನ್ನು ನಿಲ್ಲಿಸಬೇಡಿ ಎಂದು ಆತ ಬರೆದಿಟ್ಟಿದ್ದಾನೆ.
ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡಿರುವ ನಾನು ಅನಾಥ. ಸರಕಾರಗಳು ನಮ್ಮನ್ನು ಬೆಂಬಲಿಸುತ್ತಿಲ್ಲ. ನನ್ನಂತೆ ಇತರ ಕೆಲವರು ಕೂಡ ಇದೇ ಹಾದಿ ತುಳಿಯಲಿದ್ದಾರೆ ಎಂದು ಯಾದಯ್ಯ ತಿಳಿಸಿದ್ದಾನೆ.
ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಮತ್ತು ತೆಲಂಗಾಣ ಪರ ಪಕ್ಷಗಳ ನಾಯಕರು ಆತ್ಮಹತ್ಯೆ ಮಾಡಿಕೊಂಡಿರುವ ಯಾದಯ್ಯನ ಅಂತ್ಯಸಂಸ್ಕಾರಕ್ಕಾಗಿ ಆತನ ಗ್ರಾಮಕ್ಕೆ ತೆರಳಿದ್ದಾರೆ. ಈ ಪ್ರಾಂತ್ಯದಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಶುಕ್ರವಾರದಿಂದಲೇ ತೀವ್ರ ಹಿಂಸಾಚಾರಗಳಿಗೆ ಸಾಕ್ಷಿಯಾಗಿದ್ದ ಉಸ್ಮಾನಿಯಾ ಯುನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಇನ್ನೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ನಿನ್ನೆ ಆಂಧ್ರಪ್ರದೇಶ ವಿಧಾನಸಭೆಯ ಮೇಲೆ ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಲು ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದರು ಎಂದು ಹೇಳಲಾಗಿತ್ತು. ಅವರನ್ನು ತಡೆಯುವ ಸಂದರ್ಭದಲ್ಲಿ ಪೊಲೀಸರ ಜತೆ ಸಂಘರ್ಷಕ್ಕಿಳಿದಿದ್ದ ಸಾವಿರಾರು ವಿದ್ಯಾರ್ಥಿಗಳ ಪೈಕಿ 300ರಷ್ಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.