ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಾಹಪೂರ್ವ ಸೆಕ್ಸ್: ನಗರಕ್ಕಿಂತ ಹಳ್ಳಿಗರ ಮಹಿಮೆ ಅಪಾರ..!
(Pre-marital sex | Rural youth | marriage | pre-marital sex)
ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲೇ ಹೆಚ್ಚು ಅನೈತಿಕ ಸಂಬಂಧಗಳಿವೆ ಎಂದು ವಾದಿಸುತ್ತಿರುವ ಮಂದಿ ಈಗ ಮೀಸೆ ತಿರುವಬಹುದು. ಯಾಕೆಂದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಿಂದ ನಡೆದಿರುವ ಸಮೀಕ್ಷೆಯೊಂದು ವಿವಾಹಪೂರ್ವ ಸಂಬಂಧಗಳು ಕುಗ್ರಾಮಗಳಲ್ಲೇ ಗರಿಷ್ಠ ಪ್ರಮಾಣದಲ್ಲಿದೆ ಎಂದು ಹೇಳಿದೆ.
ಒಟ್ಟಾರೆ ಲೆಕ್ಕಾಚಾರದ ಪ್ರಕಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಶೇ.15 ಪುರುಷರು ಮತ್ತು ಶೇ.4 ಮಹಿಳೆಯರು ವಿವಾಹಪೂರ್ವ ಲೈಂಗಿಕ ಸಂಪರ್ಕದಲ್ಲಿ ಭಾಗವಹಿಸುತ್ತಾರೆ ಎಂದು ಸಮೀಕ್ಷೆ ವಿವರಣೆ ನೀಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಶೇ.17ರಷ್ಟು ಪುರುಷರು ವಿವಾಹಪೂರ್ವ ಕಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಇದರ ಪ್ರಮಾಣ ನಗರ ಪ್ರದೇಶದಲ್ಲಿರುವುದು ಕೇವಲ ಶೇ.10 ಮಾತ್ರ. ಇದೇ ವಿಚಾರದಲ್ಲಿ ಮಹಿಳೆಯರನ್ನು ಹೋಲಿಸಿದಾಗ ಕುಗ್ರಾಮಗಳಲ್ಲಿ ಶೇ.4ರಷ್ಟು ಹಾಗೂ ನಗರಗಳಲ್ಲಿ ಶೇ.2ರಷ್ಟು ಮಾತ್ರ ಅನೈತಿಕ ಸಂಬಂಧಗಳು ನಡೆಯುತ್ತವೆ ಎಂದು ಸಮೀಕ್ಷೆ ತಿಳಿಸಿದೆ.
WD
ಅದೇ ಹೊತ್ತಿಗೆ ನಗರ ಮತ್ತು ಗ್ರಾಮಾಂತರಗಳಲ್ಲಿನ ಯುವಜನತೆ ಅಸುರಕ್ಷಿತ ರೀತಿಯಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂಬುದೂ ಸಮೀಕ್ಷೆಯಲ್ಲಿ ಬಹಿರಂಗವಾಗಿದ್ದು, ಭಾರತದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದೆ.
ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ತಾನ ಮತ್ತು ತಮಿಳುನಾಡಿನ 15ರಿಂದ 29ರೊಳಗಿನ 58,000ಕ್ಕೂ ಹೆಚ್ಚು ವ್ಯಕ್ತಿಗಳನ್ನು 2006ರಿಂದ 2008ರ ನಡುವೆ ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿತ್ತು.
ನಾವು ಕೈಗೊಂಡ ಸಮೀಕ್ಷೆಯಿಂದ ದೊರೆತಿರುವ ಅಂಕಿ-ಅಂಶಗಳ ಪ್ರಕಾರ 19ರೊಳಗಿನ ಶೇ.8ಕ್ಕೂ ಹೆಚ್ಚು ಯುವಕ-ಯುವತಿಯರು ಸೆಕ್ಸ್ ಅನುಭವ ಪಡೆದಿರುತ್ತಾರೆ; ಬದಲಾಗುತ್ತಿರುವ ನಮ್ಮ ಸಮಾಜದ ಹುಡುಗ-ಹುಡುಗಿಯರಿಗೆ ಮಾಹಿತಿ ಮತ್ತು ಸಮಾಲೋಚನೆಯ ಅಗತ್ಯವಿದೆ ಎಂದು ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡುತ್ತಾ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬೀ ಅಜಾದ್ ತಿಳಿಸಿದ್ದಾರೆ.
ಮದುವೆಗೆ ಮುಂಚೆ ನಡೆಸುವ ಲೈಂಗಿಕ ಚಟುವಟಿಕೆಯಲ್ಲಿ ಬಹುತೇಕ ಕಾಂಡೋಮ್ ಬಳಕೆ ಮಾಡುವುದು ಕಡಿಮೆ. ಅಲ್ಲದೆ ವಿವಾಹಪೂರ್ವ ಸಂಬಂಧಗಳು ಹಲವು ಜತೆಗಾರ-ಗಾತಿಯರೊಂದಿಗೆ ನಡೆದಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ.