ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಡ್ಲಿ ವಿಶ್ವಾಸ ದ್ರೋಹಿ, ಉಗ್ರ ನರಿ, ರಾಕ್ಷಸ: ರಾಹುಲ್ ಭಟ್
(Rahul Bhatt | David Headley | Mahesh Bhatt | Mumbai terror attack)
ಮುಂಬೈ ಭಯೋತ್ಪಾದನಾ ದಾಳಿಯ ಹಿಂದೆ ಅಮೆರಿಕಾದ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಇದ್ದಾನೆ ಎಂಬುದು ಬಹಿರಂಗವಾಗುತ್ತಿದ್ದಂತೆ ದಿಗ್ಮೂಢರಾಗಿದ್ದ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ತನ್ನ ಹಳೆ ಗೆಳೆಯನ ವಿರುದ್ಧ ಕಿಡಿ ಕಾರಿದ್ದಾರೆ. ಹೆಡ್ಲಿ ವಿಶ್ವಾಸ ದ್ರೋಹಿ, ನರಿ ವೇಷದಲ್ಲಿರುವ ಭಯೋತ್ಪಾದಕ, ರಾಕ್ಷಸ ಎಂದೆಲ್ಲಾ ಭಟ್ ಹೇಳಿಕೊಂಡಿದ್ದಾರೆ.
ಈ ಘಟನೆ ನನ್ನನ್ನು ಭಯಾನಕವಾಗಿ ನಡುಗಿಸಿದೆ. ಎಲ್ಲರಲ್ಲೂ ನಾನು ವಿಶ್ವಾಸ ಕಳೆದುಕೊಂಡಿದ್ದೇನೆ. ನನ್ನ ಪ್ರೇಯಸಿಯನ್ನು ಕೂಡ ನಾನೀಗ ನಂಬುತ್ತಿಲ್ಲ. ನನ್ನ ಕುಟುಂಬದ ವ್ಯಕ್ತಿಗಳನ್ನು ಶಂಕಿಸಲಾರಂಭಿಸಿದ್ದೇನೆ. ಇನ್ನು ಯಾರನ್ನೂ ನಂಬುವುದು ನನ್ನಿಂದಾಗದು. ಎಲ್ಲರನ್ನೂ ಸಂಶಯದಿಂದಲೇ ನೋಡುವ ಓರ್ವ ವಿಚಿತ್ರ ಪೊಲೀಸನಂತಾಗಿದ್ದೇನೆ. ಇದು ಸಂಶಯದ ರೋಗ ಎಂದು 28ರ ಹರೆಯದ ಭಟ್ ವಿವರಿಸಿದ್ದಾರೆ.
PTI
ಹೆಡ್ಲಿ ಘಟನೆಯಿಂದ ಇತರರನ್ನು ಅದರಲ್ಲೂ ವಿದೇಶೀಯರನ್ನು ದ್ವೇಷಿಸುವಂತಾಗಿದೆ, ಅವರನ್ನು ನಂಬಲು ಸಾಧ್ಯವಾಗುತ್ತಿಲ್ಲ, ಸಂಶಯದಿಂದಲೇ ನೋಡುತ್ತಿದ್ದೇನೆ. ಎಲ್ಲಾ ಮಾನವ ಸಂಬಂಧಗಳಲ್ಲೂ ನಾನು ನಂಬಿಕೆ ಕಳೆದುಕೊಂಡಿದ್ದೇನೆ. ತಡವಾಗಿಯಾದರೂ ನಡೆದಿರುವ ಇಂತಹ ಘಟನೆ ನನ್ನನ್ನು ವಿವೇಕಯುತನನ್ನಾಗಿಸಿದೆ ಎಂದು ಪೌಷ್ಠಿಕಾಹಾರ ಹಾಗೂ ಫಿಟ್ನೆಸ್ ತಜ್ಞರಾಗಿರುವ ಭಟ್ ಹೇಳುತ್ತಾರೆ.
ಮುಂಬೈ ಭಯೋತ್ಪಾದನಾ ದಾಳಿಗೂ ಮೊದಲು ಭಾರತಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಹೆಡ್ಲಿ ಮುಂಬೈಯಲ್ಲಿ ರಾಹುಲ್ ಭಟ್ ಜತೆ ಸಂಪರ್ಕ ಹೊಂದಿದ್ದ. ಇವರಿಬ್ಬರ ನಡುವೆ ಉದ್ಯಮ ಸಂಬಂಧವೂ ಇತ್ತು. ಇದೇ ಕಾರಣದಿಂದ ಭಟ್‌ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದರು.
ಹೆಡ್ಲಿ ಸಂಬಂಧದ ಕುರಿತು ಪ್ರಶ್ನೆಯೆಸೆದಾಗ ತಕ್ಷಣವೇ ಕ್ಷೋಭೆಗೊಂಡ ಭಟ್, 'ನನಗೆ ಹೆಡ್ಲಿ ಗೊತ್ತಿದ್ದನೇ? ಉತ್ತರ ಹೌದು ಅಥವಾ ಅಲ್ಲ. ನನಗೆ ಪರಿಚಯವಿದ್ದ ಡೇವಿಡ್ ಹೆಡ್ಲಿ ಭಿನ್ನ ವ್ಯಕ್ತಿ. ಈಗ ಬೆಳಕಿಗೆ ಬಂದಿರುವ ಡೇವಿಡ್ ಕಿರಾತಕ' ಎಂದರು.
ಹೆಡ್ಲಿಯೊಂದಿಗಿನ ಮಾತುಕತೆ ಸಂದರ್ಭದಲ್ಲಿ ಯಾವತ್ತೂ ತನಗೆ ಭಯೋತ್ಪಾದನಾ ಸಂಬಂಧಗಳಿವೆ ಎಂಬ ಸಂಶಯ ಬರಲು ಆತ ಅವಕಾಶವನ್ನೇ ನೀಡಿರಲಿಲ್ಲ. ನನ್ನ ತಂದೆ ಭಯೋತ್ಪಾದನೆ ಬಗ್ಗೆ ಚಿತ್ರ ಮಾಡುತ್ತಿರುವ ಸಂದರ್ಭದಲ್ಲಿ ನಾನು ಆತನಿಂದ ಅಮೆರಿಕಾ ಪ್ರಜೆಯ ಅಭಿಪ್ರಾಯವನ್ನು ಪಡೆದುಕೊಂಡಿದ್ದೆ ಎಂದು ಬೆಳೆಯುತ್ತಿರುವ ನಟನೂ ಆಗಿರುವ ಭಟ್ ಹೇಳಿದ್ದಾರೆ.
ಆತ ಇತರರಂತೆ ಕೇವಲ ಒಬ್ಬ ಅಮೆರಿಕನ್ ಪ್ರಜೆಯಲ್ಲ. ಆತ ಅತಿ ಬುದ್ಧಿವಂತ ವ್ಯಕ್ತಿ. ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡಿದ್ದ, ಉನ್ನತ ಜ್ಞಾಪಕ ಶಕ್ತಿ ಹೊಂದಿದ್ದ ವ್ಯಕ್ತಿ. ಆತ ಕೇವಲ ಭಯೋತ್ಪಾದಕ ಎಂದು ನಂಬಲು ನನಗೆ ಕನಸಿನಲ್ಲೂ ಸಾಧ್ಯವಾಗುತ್ತಿಲ್ಲ. ಆತ ಒಬ್ಬ ನರಿ ವೇಷದ ಭಯೋತ್ಪಾದಕ. ಒಬ್ಬ ವಿಶ್ವಾಸ ದ್ರೋಹಿಯನ್ನು ಕಲ್ಪಿಸಿಕೊಳ್ಳಿ... ಖಂಡಿತಾ ಆತ ಕಿರಾತಕ ಎಂದು ಭಟ್ ತನ್ನ ಆಕ್ರೋಶವನ್ನು ಹೊರಗೆ ಹಾಕಿದ್ದಾರೆ.
ಪಾಕಿಸ್ತಾನ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿದ್ದಾನೆ ಎಂದು ಹೇಳಲಾಗಿದ್ದು, ಹಲವು ಆರೋಪಗಳ ಹಿನ್ನೆಲೆಯಲ್ಲಿ ಆತನನ್ನು ಕಳೆದ ವರ್ಷ ಚಿಕಾಗೋದಲ್ಲಿ ಅಮೆರಿಕಾ ಬಂಧಿಸಿದೆ.