ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾರ್ ಬಾಲೆಯರ ಜತೆ ಜನತಾದಳ ಶಾಸಕನ ನಂಗಾನಾಚ್!
(JDU MLA | dancing with bar girls | Shyam Bahadu Singh | Nitish Kumar)
ಓಟ್ ಬ್ಯಾಂಕ್ ರಾಜಕಾರಣ ಮಾಡಲು ಹೋಗಿ ಸಂಯುಕ್ತ ಜನತಾದಳದ ಶಾಸಕರೊಬ್ಬರು ಇಕ್ಕಟ್ಟಿಗೆ ಸಿಲುಕಿದ್ದಾರೆ. ದಲಿತರನ್ನು ಓಲೈಸಲೆಂದು ತನ್ನ ಮನೆಯಲ್ಲೇ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಬಾರ್ ಬಾಲೆಯರ ನರ್ತನ ಆರಂಭವಾಗುತ್ತಿದ್ದಂತೆ, ಸ್ವತಃ ಶಾಸಕರೂ ವೇದಿಕೆಯೇರಿ ಕುಣಿದು ಕುಪ್ಪಳಿಸಿದ್ದಾರೆ.
ಬಿಹಾರದ ಜಿರಾದೈ ಕ್ಷೇತ್ರದ ಜೆಡಿಯು ಶಾಸಕ ಶ್ಯಾಮ್ ಬಹದ್ದೂರ್ ಸಿಂಗ್ ತನ್ನ ಮನೆಯಲ್ಲೇ ದಲಿತರಿಗಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ದಲಿತರಿಗೆ ಪುಕ್ಕಟೆ ಮನರಂಜನೆ ನೀಡುವ ಮೂಲಕ ಅವರ ಒಲವು ಗಿಟ್ಟಿಸಿಕೊಳ್ಳುವುದು ಶಾಸಕರ ಉದ್ದೇಶವಾಗಿತ್ತು.
ಅರೆ-ಬರೆ ಬಟ್ಟೆ ತೊಟ್ಟಿದ್ದ ಮಾನಿನಿಯರು ಕುಣಿಯುತ್ತಿದ್ದಂತೆ ಮದಿರೆಯನ್ನೇರಿಸಿಕೊಂಡಿದ್ದ ಶಾಸಕ ಸಿಂಗ್ ಕೂಡ ವೇದಿಕೆಯನ್ನೇರಿ ಅಶ್ಲೀಲವಾಗಿ ಕುಣಿದಿದ್ದಾರೆ. ಅವರ ದುರದೃಷ್ಟವೆಂದರೆ ಇವೆಲ್ಲವನ್ನೂ ವೀಡಿಯೋ ಕ್ಯಾಮರಾವೊಂದು ಸೆರೆ ಹಿಡಿದದ್ದು.
ಭಾನುವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾಗವಹಿಸಲಿದ್ದ 'ಮಹಾ ದಲಿತ್ ರ‌್ಯಾಲಿ'ಗೂ ಹಿಂದಿನ ದಿನ ತನ್ನ ಮನೆಯಲ್ಲೇ ಡ್ಯಾನ್ಸ್ ಕಾರ್ಯಕ್ರಮ ಏರ್ಪಡಿಸಿದ್ದ ಆಡಳಿತಾರೂಢ ಪಕ್ಷದ ಶಾಸಕ ಸಿಂಗ್ ಇದೀಗ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ಪಕ್ಷ ಯಾವ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಕ್ಷೇತ್ರದ ಜನತೆಗಾಗಿ ನಾನು ಈ ಕಾರ್ಯಕ್ರಮ ಆಯೋಜಿಸಿದ್ದು ಮತ್ತು ನಾನು ವರ್ತಿಸಿದ ರೀತಿ ಎರಡೂ ತಪ್ಪೆಂದು ನನ್ನ ಅರಿವಿಗೆ ಬಂದಿದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಮುಖ್ಯಮಂತ್ರಿಯವರು ಯಾವ ಕ್ರಮ ಬೇಕಾದರೂ ಕೈಗೊಳ್ಳಬಹುದು ಎಂದು ಸಿಂಗ್ ಹೇಳಿದ್ದಾರೆ.
ಇದನ್ನೇ ಅಸ್ತ್ರವಾಗಿ ಹಿಡಿದುಕೊಂಡಿರುವ ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಶಾಸಕರನ್ನು ವಜಾ ಮಾಡುವಂತೆ ಆಗ್ರಹಿಸಿದೆ.
ಜನರಿಂದ ಚುನಾಯಿತರಾದ ಜನಪ್ರತಿನಿಧಿಯೊಬ್ಬರು ಈ ರೀತಿ ಕುಡಿದು ನರ್ತಕಿಯರ ಜತೆ ಅಶ್ಲೀಲವಾಗಿ ಸಾರ್ವಜನಿಕರೆದುರು ಕುಣಿದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ವಿಧಾನಸಭೆಯಲ್ಲಿ ಪ್ರಶ್ನಿಸುವುದಾಗಿ ಆರ್‌ಜೆಡಿ ಹೇಳಿದೆ.