ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಸ್ತಾನ ಪ್ರತಿಪಕ್ಷ ನಾಯಕಿ ವಸುಂಧರಾ ರಾಜೆ ರಾಜೀನಾಮೆ (Rajasthan | Vasundhara Raje | Assembly Opposition Leader | BJP)
Bookmark and Share Feedback Print
 
ರಾಜಸ್ತಾನದ ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯವರು ವಿಧಾನಸಭೆ ವಿರೋಧಪಕ್ಷದ ನಾಯಕಿಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ಪಕ್ಷದೊಳಗೆ ನಡೆಯುತ್ತಿದ್ದ ಬಣ ರಾಜಕೀಯ ಮತ್ತೊಂದು ಮಜಲಿಗೆ ತಲುಪಿದೆ.

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಫಲಿತಾಂಶಕ್ಕೆ ರಾಜೆಯವರನ್ನು ಹೊಣೆಗಾರ್ತಿಯನ್ನಾಗಿ ಮಾಡಿದ್ದ ಪಕ್ಷದ ಹೈಕಮಾಂಡ್ ನಿಲುವನ್ನು ವಿರೋಧಿಸಿ ಕಳೆದ ವರ್ಷದ ಅಕ್ಟೋಬರ್ 23ರಂದೇ ರಾಜೀನಾಮೆ ಸಲ್ಲಿಸಿದ್ದರು. ಆದರೆ ಇದನ್ನು ಸ್ಪೀಕರ್ ದೀಪೇಂದ್ರ ಸಿಂಗ್ ಶೇಖಾವತ್ ಅವರಿಗೆ ರವಾನಿಸಿರಲಿಲ್ಲ.
PTI


ಇಂದು ಬೆಳಗ್ಗೆ ರಾಜೆ ಅವರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಬಿಜೆಪಿಯ ಸಚೇತಕ ಆರ್.ಎಸ್. ರಾಥೋಡ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ರಾಜೀನಾಮೆ ಸಲ್ಲಿಸಿರುವ ರಾಜೆಯವರು ತನ್ನ ಪತ್ರದಲ್ಲಿ, 'ತಾನು ಪಕ್ಷದ ಶಿಸ್ತಿನ ಕಾರ್ಯಕರ್ತೆಯಾಗಿ ಮುಂದುವರಿಯುತ್ತೇನೆ. ಸದನದಲ್ಲಿ ಸಾರ್ವಜನಿಕ ದನಿಯಾಗುವುದನ್ನು ಮುಂದುವರಿಸುತ್ತೇನೆ' ಎಂದಿದ್ದಾರೆ.

ರಾಜನಾಥ್ ಸಿಂಗ್ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ರಾಜೆಯವರನ್ನು ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು. ಆದರೂ ಒತ್ತಡಕ್ಕೆ ಜಗ್ಗದ ರಾಜೆ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿದ್ದರು. ಪಕ್ಷದೊಳಗೆ ಈ ಸಂಬಂಧ ಹಲವು ಬಣಗಳು ಹುಟ್ಟಿಕೊಂಡಿದ್ದವು.

ಇತ್ತೀಚೆಗಷ್ಟೇ ಇಂದೋರ್‌ನಲ್ಲಿ ಮುಕ್ತಾಯಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೂ ರಾಜೆಯವರು ಆಗಮಿಸಿರಲಿಲ್ಲ. ಈ ಸಂದರ್ಭದಲ್ಲೇ ಅವರ ರಾಜೀನಾಮೆಯನ್ನು ಪಡೆಯುವ ಕಠಿಣ ನಿರ್ಧಾರಕ್ಕೆ ನೂತನ ಅಧ್ಯಕ್ಷ ನಿತಿನ್ ಗಡ್ಕರಿಯವರು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.

ಪಕ್ಷದ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಿದ ನಂತರ ಒಂದು ವಾರದೊಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪಕ್ಷದ ಹಿರಿಯ ಮುಖಂಡರು ಒಂದೆರಡು ದಿನಗಳಲ್ಲಿ ಇಲ್ಲಿಗೆ ಬರಲಿದ್ದು, ಹೊಸ ನಾಯಕತ್ವದ ಕುರಿತು ಎಲ್ಲರ ಅಭಿಪ್ರಾಯ ಪಡೆಯಲಿದ್ದಾರೆ. ಅಷ್ಟರವರೆಗೆ ಉಪನಾಯಕ ಘನಶ್ಯಾಂ ತಿವಾರಿಯವರು ವಿರೋಧಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ