ತಮ್ಮೊಂದಿಗೆ ಸಹಕರಿಸಲು ನಿರಾಕರಿಸಿದ 25ರ ಹರೆಯದ ದಲಿತ ಯುವತಿಯೊಬ್ಬಳನ್ನು ಯುವಕರ ಗುಂಪೊಂದು ಅಮಾನುಷವಾಗಿ ಬೆಂಕಿಯಲ್ಲಿ ಸುಟ್ಟ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದ್ದು, ಗಂಭೀರ ಗಾಯಗೊಂಡಿರುವ ಬಲಿಪಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಕನ್ನೌಜ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಅಲ್ತಾಫ್ ಮತ್ತು ಆತನ ಇಬ್ಬರು ಸಹಚರರು ಈ ದಲಿತ ಯುವತಿಯ ಮೇಲೆ ಬೆಂಕಿ ಹಚ್ಚಿದ್ದು, ತೀವ್ರ ಗಾಯಗೊಂಡಿರುವ ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ.
ಇದೇ ಜಿಲ್ಲೆಯ ತಾಜ್ಪುರ್ ನಗರದ ನಿವಾಸಿಯಾಗಿರುವ ದಲಿತ ಮಹಿಳೆ ಅಂಗಡಿಯೊಂದಕ್ಕೆ ಹೋಗುತ್ತಿದ್ದಳು. ಅದೇ ನಗರದ ಅಲ್ತಾಫ್ ಮತ್ತು ಆತನ ಗೆಳೆಯರು ಯುವತಿಯನ್ನು ತಡೆದು ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು. ಈ ಹೊತ್ತಿಗೆ ಯುವತಿ ಬೊಬ್ಬೆ ಹಾಕಿದ್ದಳು. ಇದರಿಂದ ಕೆರಳಿದ ಅಲ್ತಾಫ್, ಸೀಮೆಎಣ್ಣೆಯನ್ನು ಆಕೆ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ನಂತರ ತಲೆ ಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ದುಷ್ಕರ್ಮಿಗಳನ್ನು ಸೆರೆ ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಇದೇ ಕಾರಣದಿಂದ ಅವರ ಮನೆಯ ಕೆಲವು ಸದಸ್ಯರನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಈ ಜಿಲ್ಲೆಯ ಡಿಎಸ್ಪಿ ಹರದೇವ್ ಸಿಂಗ್ ತಿಳಿಸಿದ್ದಾರೆ.
ಈ ನಡುವೆ ಸೋಮವಾರ ದಲಿತ ಸಮುದಾಯವವರು ಹಲವು ನಗರಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನಾ ಸರಣಿಗಳೇ ನಡೆದಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಹೆಚ್ಚುವರಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.