ಮಿಡ್ನಾಪುರ್, ಮಂಗಳವಾರ, 23 ಫೆಬ್ರವರಿ 2010( 11:24 IST )
ಕೇಂದ್ರ ಸರಕಾರ ಮತ್ತು ಪಶ್ಚಿಮ ಬಂಗಾಲ ರಾಜ್ಯ ಸರಕಾರಗಳಿಗೆ 72 ದಿನಗಳ ಷರತ್ತುಬದ್ಧ ಕದನವಿರಾಮ ಪ್ರಸ್ತಾಪವನ್ನು ನೀಡಿದ ಗಂಟೆಯೊಳಗೆ ಮಾವೋವಾದಿಗಳು ಭದ್ರತಾ ಪಡೆಗಳ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ನಕ್ಸಲ್ ಪ್ರಾಬಲ್ಯ ಪ್ರದೇಶ ಕಂತಾಪಹಾರಿಯಲ್ಲಿನ ಸಿಆರ್‌ಪಿಎಫ್ ಕ್ಯಾಂಪಿನ ಮೇಲೆ ಸೋಮವಾರ ರಾತ್ರಿ ಈ ದಾಳಿ ನಡೆದಿದೆ.
ಮಾವೋವಾದಿಗಳ ಸಹಕಾರದಿಂದ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ವಿರೋಧಿ ಸಮಿತಿ (ಪಿಸಿಪಿಎ) ಸದಸ್ಯರು ಭದ್ರತಾ ಪಡೆಗಳು ತಂಗಿರುವ ಕಂತಾಪಹಾರಿ ಶಿಬಿರದ ಸುತ್ತ ಜಮಾಯಿಸಿ ಗುಂಡು ಹಾರಿಸಲಾರಂಭಿಸಿದರು. ಈ ಹೊತ್ತಿನಲ್ಲಿ ನಮ್ಮ ಸಿಬ್ಬಂದಿಗಳು ಕೂಡ ಅವರತ್ತ ಗುಂಡು ಹಾರಿಸಿದ್ದಾರೆ ಎಂದು ಮಂಗಳವಾರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ವರ್ಮಾ ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಈತ ಪಿಸಿಪಿಎ ಸದಸ್ಯ ಲಾಲ್‌ಮೋಹನ್ ತುಡು ಎಂದು ಗುರುತಿಸಲಾಗಿದೆ. ಈ ಗುಂಪಿನಲ್ಲಿ ಹಲವು ನಕ್ಸಲರಿದ್ದರು. ತಕ್ಷಣವೇ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
ನಕ್ಸಲರನ್ನೊಳಗೊಂಡಿದ್ದ ಪಿಸಿಪಿಎ ಸದಸ್ಯರು ಭದ್ರತಾ ಪಡೆಗಳು ಉಳಿದುಕೊಂಡಿದ್ದ ಕ್ಯಾಂಪಿನ ಮೇಲೆ ದಾಳಿ ನಡೆಸಿ ಅಪಾರ ಹಾನಿ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದರು. ಆದರೆ ನಮ್ಮ ಸಿಬ್ಬಂದಿಗಳು ಜಾಗೃತ ಸ್ಥಿತಿಯಲ್ಲಿದ್ದ ಕಾರಣ ಅವರ ಪ್ರಯತ್ನ ವಿಫಲವಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಮೂಲಗಳ ಪ್ರಕಾರ ಪಿಸಿಪಿಎ ಬಣದಲ್ಲಿ ಹೆಚ್ಚಿನ ಸಾವು ಸಂಭವಿಸಿದೆ. ಎರಡು ಅಥವಾ ಮೂರು ಮಂದಿ ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಆದರೆ ಒಂದಕ್ಕಿಂತ ಹೆಚ್ಚು ಶವ ಪತ್ತೆಯಾಗಿಲ್ಲ.
72 ಗಂಟೆಗಳ ಕದನವಿರಾಮಕ್ಕೆ ಆಹ್ವಾನ ನೀಡಿದ್ದರು... ಇದುವರೆಗೂ ಸರಕಾರದ ಜತೆ ಮಾತುಕತೆ ನಿರಾಕರಿಸುತ್ತಾ ಬಂದಿದ್ದ ಮಾವೋವಾದಿ ಮುಖಂಡ ಕಿಶನ್‌ಜೀ ಇದ್ದಕ್ಕಿದ್ದಂತೆ ತನ್ನ ನಿಲುವನ್ನು ಸಡಿಲಿಸಿ, ಯುದ್ಧವಿರಾಮಕ್ಕೆ ಸಿದ್ಧ ಎಂದು ಹೇಳಿಕೆ ನೀಡಿದ್ದ.
ಭದ್ರತಾ ಪಡೆಗಳು ಪಶ್ಚಿಮ ಬಂಗಾಲ, ಬಿಹಾರ, ಜಾರ್ಖಂಡ್ ಮತ್ತು ಒರಿಸ್ಸಾಗಳಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದರೆ ಯಾವುದೇ ನಕ್ಸಲ್ ಸಂಘಟನೆಗಳು 72 ದಿನಗಳ ಕಾಲ ಹಿಂಸಾಚಾರವನ್ನು ನಡೆಸುವುದಿಲ್ಲ ಎಂದು ತಿಳಿಸಿದ್ದ.
ಮಾವೋವಾದಿಗಳು ಹುತಾತ್ಮರ ದಿನ ಎಂದು ಆಚರಿಸುವ ಫೆಬ್ರವರಿ 25ರಿಂದ ಈ ಗಡುವು ಆರಂಭವಾಗಲಿದ್ದು, ಮೇ 7ರಂದು ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ನಮ್ಮ ಕಡೆಯಿಂದ ಹಿಂಸಾಚಾರ ನಡೆಯುವುದಿಲ್ಲ ಎಂದು ಕಿಶನ್‌ಜೀ ಸರಕಾರಗಳ ಗಮನಕ್ಕೆ ತಂದಿದ್ದಾನೆ.
ಆದರೆ ಕೇಂದ್ರ ಸರಕಾರ ಮಂಗಳವಾರ ಬೆಳಗ್ಗಿನವರೆಗೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.