ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎಗೆ ಕೊನೆಗೂ ಬೆಲೆ ಏರಿಕೆ ಬಿಸಿ ಮುಟ್ಟಿಸಿದ ವಿಪಕ್ಷಗಳು (Parliament | price rise | Budget session | Opposition)
Bookmark and Share Feedback Print
 
ನವದೆಹಲಿ: ಬೆಲೆಯೇರಿಕೆ ಕುರಿತು ಚರ್ಚೆ ನಡೆಯಲೇಬೇಕೆಂದು ಬಜೆಟ್ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಬಿಜೆಪಿ ಮತ್ತು ಎಡಪಕ್ಷಗಳು ಪಟ್ಟು ಹಿಡಿದು ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸಂಸತ್ತಿನ ಎರಡೂ ಸದನಗಳನ್ನು ನಾಳೆಯವರೆಗೆ ಮುಂದೂಡಲಾಗಿದೆ.

ಸಂಸತ್ತಿನ ಕೆಳಮನೆ ಲೋಕಸಭೆಯಲ್ಲಿ ಸ್ಪೀಕರ್ ಮಾತಿಗೂ ಕಿವಿಗೊಡದೆ ಬಿಜೆಪಿ ಮತ್ತು ಎಡಪಕ್ಷಗಳ ಸದಸ್ಯರು ಬೆಲೆಯೇರಿಕೆಯ ಕುರಿತು ಚರ್ಚೆಗೆ ಪಟ್ಟು ಹಿಡಿದರು. ಈ ಹಿಂದಿನ ಚರ್ಚೆಗಳಲ್ಲಿ ಯಾವುದೇ ಫಲಿತಾಂಶ ಬರದ ಕಾರಣ ನಿಲುವಳಿ ಗೊತ್ತುವಳಿ ಮೂಲಕ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಆದರೆ ಸರಕಾರವು ನಿಲುವಳಿ ಗೊತ್ತುವಳಿ ಚರ್ಚೆಗೆ ನಿರಾಕರಿಸಿದೆ. ಆದರೆ ನಿಯಮ 193ರ ಅಡಿಯಲ್ಲಿ ವಿಶೇಷ ಚರ್ಚೆಗೆ ತಾನು ಸಿದ್ಧ ಎಂದು ಹೇಳಿತು. ಇದನ್ನು ವಿರೋಧಿಸಿದ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಸ್ಪೀಕರ್ ನಾಳೆಗೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂತು. ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಲ್ಲದೆ, ನಿಯಮ 167ರಡಿಯಲ್ಲಿ ಬೆಲೆಯೇರಿಕೆ ಕುರಿತು ನಿಲುವಳಿ ಗೊತ್ತುವಳಿ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿತು.

ಆದರೆ ಸರಕಾರ ತನ್ನ ಹಿಂದಿನ ನಿರ್ಧಾರಕ್ಕೆ ಅಂಟಿಕೊಂಡು ನಿಲುವಳಿ ಗೊತ್ತುವಳಿಗೆ ನಿರಾಕರಿಸಿದೆ. ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ವಿಫಲವಾಗಿರುವುದು ರಾಜ್ಯಗಳೇ ಹೊರತು ಕೇಂದ್ರ ಸರಕಾರವಲ್ಲ ಎಂಬ ವಾದವನ್ನು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಮುಂದುವರಿಸಿದೆ.

ಈ ನಡುವೆ ಸರಕಾರವು ತನ್ನದೇ ಕೂಟದ ಎರಡು ಮಿತ್ರಪಕ್ಷಗಳಿಂದಲೂ ಈ ವಿಚಾರದಲ್ಲಿ ಬಿಸಿ ಎದುರಿಸುತ್ತಿದೆ. ಕೇಂದ್ರ ಸರಕಾರವು ಅಗತ್ಯ ವಸ್ತುಗಳ ಬೆಲೆಯೇರಿಕೆ ವಿಚಾರವನ್ನು ನಿಭಾಯಿಸಲು ವಿಫಲವಾಗಿದೆ ಎಂದು ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಆರೋಪಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ