ರೈಲಿನಲ್ಲಿ ಭಾರತ ಪ್ರವೇಶಿಸಿದ ಪಾಕ್ ಬಾಲಕ ಇಕ್ಕಟ್ಟಿನಲ್ಲಿ
ಅಮೃತಸರ, ಮಂಗಳವಾರ, 23 ಫೆಬ್ರವರಿ 2010( 15:40 IST )
ಸಮ್ಜೋತಾ ಎಕ್ಸ್‌ಪ್ರೆಸ್ ರೈಲಿನ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಲಾಹೋರ್ ಮೂಲದ ಈತ ಅರಿವಿಲ್ಲದೆ ರೈಲಿನ ಮೂಲಕ ಗಡಿ ದಾಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
13ರ ಹರೆಯದ ಈ ಬಾಲಕನನ್ನು ಅಸ್ಲಾಂ ಎಂದು ಗುರುತಿಸಲಾಗಿದೆ. ಪಾಸ್‌ಪೋರ್ಟ್ ಮತ್ತು ವಿದೇಶೀಯರ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಆತ ಕನಿಷ್ಠ ಐದು ವರ್ಷಗಳ ಜೈಲು ಅನುಭವಿಸಬೇಕಾಗಿದೆ.
ಲಾಹೋರ್‌ನಲ್ಲಿನ ಮನೆಯಿಂದ ಹೊರಗೆ ಹೋಗಿದ್ದ ಈತ ಸಮ್ಜೋತಾ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ. ಈತನನ್ನು ಅಮೃತಸರದ ಅತ್ತಾರಿಯಲ್ಲಿ ಸೋಮವಾರ ರಾತ್ರಿ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಡರಾತ್ರಿ ನಾನು ಸಿನಿಮಾ ನೋಡಲೆಂದು ಹೋಗಿದ್ದೆ. ನನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದುಕೊಂಡು ಓಡತೊಡಗಿದೆ. ನಂತರ ರೈಲು ನಿಲ್ದಾಣವೊಂದಕ್ಕೆ ತಲುಪಿ, ಒಂದು ರೈಲಿಗೆ ಹತ್ತಿದ್ದೆ. ಇಲ್ಲಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ ಎಂದು ಅಸ್ಲಾಂ ವಿವರಿಸಿದ್ದಾನೆ.
ಅಸ್ಲಾಂ ತಪ್ಪಿ ಭಾರತ ಪ್ರವೇಶಿಸಿದ್ದಾನೆ ಎಂದು ರೈಲ್ವೇ ಪೊಲೀಸರು ಕೂಡ ಹೇಳಿದ್ದಾರೆ.
ಆತ ಮನೆಯವರನ್ನು ನೋಡದೆ ಈಗಾಗಲೇ ತಿಂಗಳು ಕಳೆದಿದೆ. ಲಾಹೋರ್‌ನಲ್ಲಿನ ಸರಕಾರಿ ಶಾಲೆಯೊಂದರ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಈಗ ಗೆಳೆಯರಿಂದಲೂ ದೂರವಿದ್ದು, ಹತ್ತಿರ ಸೇರಲು ಮತ್ತಷ್ಟು ಸಮಯ ತಗುಲಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ತನ್ನ ಕುಟುಂಬದ ಬಳಿ ಇಲ್ಲಿನ ಸರಕಾರ ಕಳುಹಿಸಲಿದೆ ಎಂಬ ಭರವಸೆ ಅಸ್ಲಾಮ್‌ನದ್ದು. ಆದರೆ ಭಾರತ-ಪಾಕಿಸ್ತಾನಗಳ ಸಂಬಂಧ ದಿನಕ್ಕೊಂದು ಸ್ವರೂಪ ಪಡೆಯುತ್ತಿರುವುದರಿಂದ ಈತನ ಹಸ್ತಾಂತರ ಸರಾಗವಾಗಿ ನಡೆಯುವುದು ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ.