ತಮಗೆ ಜೈಲಿನಲ್ಲಿ ಹೊಡೆಯಲಾಗುತ್ತಿದೆ, ಹಿಂಸೆ ನೀಡಲಾಗುತ್ತಿದೆ ಎಂದು 2008ರ ದೆಹಲಿ ಸರಣಿ ಸ್ಫೋಟಕ್ಕೆ ಸಂಬಂಧಪಟ್ಟಂತೆ ಸೆರೆಮನೆಯಲ್ಲಿರುವ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕರು ನ್ಯಾಯಾಧೀಶರಲ್ಲಿ ದೂರಿಕೊಂಡಿದ್ದಾರೆ.
ನಮಗೆ ಅಹಮದಾಬಾದ್ ಜೈಲಿನೊಳಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ, ಅಣಕಿಸಲಾಗುತ್ತಿದೆ, ಹೊಡೆಯಲಾಗುತ್ತಿದೆ. ಇದನ್ನು ನಾವು ಜೈಲಿನ ಉನ್ನತ ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದೇವೆ. ಆದರೆ ಅವರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೊಬಿನ್ ಕದೇರ್ ಶೇಖ್ ದೂರು ನೀಡಿದ್ದಾನೆ.
ಅಹಮದಾಬಾದ್‌ನಲ್ಲಿನ ಸಾಬರಮತಿ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿ ಸರಣಿ ಸ್ಫೋಟದ ವಿಚಾರಣೆ ನಡೆಸಿದ ಅಡಿಷನಲ್ ಸೆಷನ್ಸ್ ನ್ಯಾಯಮೂರ್ತಿ ಸಂತೋಷ್ ಸ್ನೇಹಿ ಮನ್ ಅವರಲ್ಲಿ ಶೇಖ್, ಆಸಿಫ್ ಬಶೀರ್ ಶೇಖ್ ಮತ್ತು ಮೊಹಮ್ಮದ್ ಶಕೀಲ್ ತಮ್ಮ ದೂರುಗಳನ್ನು ನೀಡಿದರು.
ಜೈಲು ಅಧಿಕಾರಿಗಳು ಆರೋಪಿಗಳ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ ಅವರ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವರದಿಯನ್ನೂ ಸಲ್ಲಿಸಿದ್ದಾರೆ.
ನಮ್ಮನ್ನು ಬೆದರಿಸುವ ನಿಟ್ಟಿನಲ್ಲಿ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಕಾರಾಗೃಹದೊಳಗೆ ನಮ್ಮ ಸಹಚರ ಡಾ. ಮಿರ್ಜಾ ಅಹ್ಮದ್ ಬೇಗ್ ಎಂಬವರಿಗೆ ತೀವ್ರವಾಗಿ ಥಳಿಸಿದ್ದಾರೆ ಎಂದೂ ಈ ಮೂವರು ಆರೋಪಿಸಿದ್ದಾರೆ.
ಆರೋಪಿಗಳ ಆರೋಪವನ್ನು ಪರಿಗಣಿಸಿರುವ ನ್ಯಾಯಾಲಯವು, ಜೈಲಿನ ಪರಿಸ್ಥಿತಿ ಮತ್ತು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾರ್ಚ್ ಆರರೊಳಗೆ ವಿವರಿಸುವಂತೆ ಆದೇಶ ನೀಡಿದೆ.
2008ರ ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 26 ಮಂದಿ ಸಾವನ್ನಪ್ಪಿ, 135ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಐದು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.