ಹಸುಗೂಸು ಸುಟ್ಟು ಹೋದರೂ ನರ್ಸ್ ಗಾಢ ನಿದ್ದೆ ಬಿಡಲಿಲ್ಲ..!
ನಾಗ್ಪುರ, ಬುಧವಾರ, 24 ಫೆಬ್ರವರಿ 2010( 09:02 IST )
ಸರಕಾರಿ ಆಸ್ಪತ್ರೆಯ ಇನ್‌ಕ್ಯುಬೇಟರಿನಲ್ಲಿದ್ದ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ನರ್ಸ್ ಒಬ್ಬಳು ಗಾಢ ನಿದ್ದೆಗೆ ಜಾರಿದ ಪರಿಣಾಮ ನಾಲ್ಕು ದಿನಗಳ ಹಸುಳೆಯೊಂದು ಅನ್ಯಾಯವಾಗಿ ಜೀವಂತ ಸುಟ್ಟು ಹೋಗಿದೆ.
ಅವಧಿಗೆ ಮುಂಚೆಯೇ ಹುಟ್ಟಿದ್ದ ಅವಳಿ ಮಕ್ಕಳಲ್ಲಿ ಒಂದು ತೀರಾ ಬಡವಾಗಿದ್ದರಿಂದ ನಾಗ್ಪುರದ ಸರಕಾರಿ ಆಸ್ಪತ್ರೆಯ ಇನ್‌ಕ್ಯುಬೇಟರ್‌ನಲ್ಲಿಡಲಾಗಿತ್ತು. ಇದರ ಜವಾಬ್ದಾರಿ ಹೊತ್ತಿದ್ದ ಆಸ್ಪತ್ರೆಯ ನರ್ಸ್ ರಾತ್ರಿ ಡ್ಯೂಟಿಯ ಸಂದರ್ಭದಲ್ಲಿ ಮಗುವನ್ನು ನೋಡಿಕೊಳ್ಳುವ ಬದಲು ನಿದ್ದೆ ಮಾಡಿದ ಪರಿಣಾಮ ಮಗು ಜೀವಂತವಾಗಿ ಸುಟ್ಟು ಹೋಗಿದೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.
30ರ ಹರೆಯದ ಪ್ರವೀಣ್ ಕಾಳೆ ಮತ್ತು 22ರ ಹರೆಯದ ದುರ್ಗಾ ಎಂಬ ದಂಪತಿಗೆ ಎರಡು ಅವಳಿ ಗಂಡು ಮಕ್ಕಳು ಹುಟ್ಟಿದ್ದವು. ಪತ್ನಿ ಅನಾರೋಗ್ಯ ಪೀಡಿತಳಾಗಿದ್ದ ಕಾರಣ ಮಕ್ಕಳನ್ನು ಅವಧಿಗೆ ಮೊದಲೇ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿತ್ತು.
ಅದರಲ್ಲೊಂದು ಮಗುವಿನ ತೂಕ ತುಂಬಾ ಕಡಿಮೆಯಿದ್ದ ಕಾರಣ ಇನ್‌ಕ್ಯುಬೇಟರ್‌ನಲ್ಲಿಡುವಂತೆ (ಇನ್‌ಕ್ಯುಬೇಟರ್ - ಅಕಾಲಿಕವಾಗಿ ಹುಟ್ಟಿದ ಮಕ್ಕಳನ್ನು ಪೋಷಿಸಲು ಇರುವ ಉಪಕರಣ) ಸೂಚಿಸಲಾಗಿತ್ತು. ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲು ಕಾಳೆ ಕುಟುಂಬಕ್ಕೆ ಅಸಾಧ್ಯವಾಗಿದ್ದ ಕಾರಣ ಸರಕಾರಿ ಆಸ್ಪತ್ರೆ ಮೊರೆ ಹೋಗಿದ್ದರು.
ಮಗುವನ್ನು ಇಡಲಾಗಿದ್ದ ಇನ್‌ಕ್ಯುಬೇಟರ್‌ಗೆ ಹರಿಸಲಾಗುವ ಉಷ್ಣತೆಯನ್ನು ನಿಯಂತ್ರಿಸದೇ ಇದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಪಕ್ಕದ ಇನ್‌ಕ್ಯುಬೇಟರ್‌ಗಳಲ್ಲಿನ ಸಂಬಂಧಿಕರು ಉಷ್ಣತೆ ಹೊರಸೂಸುವ ಯಂತ್ರವನ್ನಿಟ್ಟಿದ್ದ ಸ್ಟೂಲನ್ನು ಕಾಳೆಯರ ಮಗುವಿದ್ದ ಇನ್‌ಕ್ಯುಬೇಟರಿನತ್ತ ಅರಿವಿಲ್ಲದೆ ತಳ್ಳಿರಬಹುದು. ಉಷ್ಣತೆ ಹೆಚ್ಚಿದ ಪರಿಣಾಮ ಮಗು ಸುಟ್ಟು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಇದೇ ಕೊಠಡಿಯಲ್ಲಿ ನನ್ನ ಅತ್ತೆ ರಾತ್ರಿಯಿಡೀ ಇದ್ದರು. ಈ ಸಂದರ್ಭದಲ್ಲಿ ಏನೋ ತಪ್ಪಾಗಿದೆ ಎಂದು ಅವರು ನರ್ಸ್‌ಗೆ ಹೇಳಲು ಯತ್ನಿಸಿದ್ದಾರೆ. ಆದರೆ ಅದರ ಬಗ್ಗೆ ಗಮನ ಹರಿಸದ ನರ್ಸ್ ನಿದ್ದೆ ಮುಂದುವರಿಸಿದ್ದಾರೆ. ಪರಿಣಾಮ ನನ್ನ ಮಗುವಿನ ಬಲಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಆ ನರ್ಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಕೆಲಸದಿಂದ ವಜಾ ಮಾಡಬೇಕು ಎಂದು ಮಗುವಿನ ತಂದೆ ಕಾಳೆ ಆಗ್ರಹಿಸಿದ್ದಾರೆ.
1.2 ಕಿಲೋ ಗ್ರಾಂ ತೂಕವಿರುವ ಕಾಳೆಯವರ ಮತ್ತೊಂದು ಮಗು ಕೂಡ ಗಂಭೀರವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ. ಆ ಎರಡೂ ಮಕ್ಕಳನ್ನು ಇಲ್ಲಿಗೆ ತರುವಾಗ ಅವು ಬದುಕುತ್ತವೆ ಎಂದು ಅನ್ನಿಸುತ್ತಿರಲಿಲ್ಲ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆರೋಗ್ಯ ಸಚಿವ ಡಾ. ವಿಜಯಕುಮಾರ್ ಗಾವಿತ್‌ರವರು ನಾಗರಿಕ ಪೂರೈಕೆ ಸಚಿವ ಅನಿಲ್ ದೇಶ್‌ಮುಖ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದು, ತನಿಖೆಗೆ ಆದೇಶ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ಇದೇ ಸಂದರ್ಭದಲ್ಲಿ ಅವರು ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ನಾಗ್ಪುರದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿನ ಖೇಡಿ ಕಾರ್ಯತ್ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಕಾಳೆ ತನ್ನ ಪತ್ನಿಯನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆಯಾದ ನಂತರ ಅಲ್ಲಿನ ವೆಚ್ಚ ಭರಿಸಲಾಗದೆ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು.
ಪತ್ನಿಯ ಹೆರಿಗೆ ಮತ್ತು ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿಡಲು ಈಗಾಗಲೇ ನಾನು 60,000 ರೂಪಾಯಿ ವೆಚ್ಚ ಮಾಡಿದ್ದೇನೆ. ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲು ನನ್ನ ಕೈಲಾಗದು ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ ಕಾಳೆ.
ದುರಂತವೆಂದರೆ ಇವ್ಯಾವ ವಿಚಾರವೂ ಪತ್ನಿ ದುರ್ಗಾಗೆ ತಿಳಿಯದಿರುವುದು. 'ಆಕೆಗೆ ಮಗು ಹೀಗಾಗಿರುವುದನ್ನು ನಾವು ತಿಳಿಸಿಲ್ಲ. ಮತ್ತೊಂದು ಮಗುವಿನ ಸ್ಥಿತಿಯೂ ಆಕೆಗೆ ಗೊತ್ತಿಲ್ಲ' ಎಂದು ಕಾಳೆ ತಿಳಿಸಿದ್ದಾರೆ.