ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲ್ವೇ ಬಜೆಟ್ ಬಂಗಾಲ ಕೇಂದ್ರಿತವಾಗಿಲ್ಲ: ಮಮತಾ ಸ್ಪಷ್ಟನೆ (Railway Budget 2010 | West Bengal-centric | Mamata Banerjee | Lok Sabha)
Bookmark and Share Feedback Print
 
ರೈಲ್ವೇ ಮುಂಗಡ ಪತ್ರ ಪಶ್ಚಿಮ ಬಂಗಾಲ ಕೇಂದ್ರಿತವಾಗಿದೆ ಎಂಬ ವಾದವನ್ನು ತಳ್ಳಿ ಹಾಕಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಈ ರೀತಿ ಹೇಳುತ್ತಿರುವವರು ನನ್ನ ರಾಜ್ಯವನ್ನು ಅವಮಾನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಇಂತಹ ರಾಜಕೀಯ ಪ್ರೇರಿತ ಪ್ರಶ್ನೆಗಳನ್ನು ಕೇಳಬೇಡಿ ಎಂದು ಪತ್ರಕರ್ತರಿಗೆ ಮಮತಾ ಸಲಹೆ ನೀಡಿದ್ದಾರೆ.

ನಿಮ್ಮ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತವರಿಗೆ ಹೆಚ್ಚಿನ ಗಮನವನ್ನು ಕೊಟ್ಟೀದ್ದೀರಾ ಎಂಬ ಪ್ರಶ್ನೆಗೆ ಅವರು, 'ಅದನ್ನೇ ಮತ್ತೆ ಮತ್ತೆ ಹೇಳುವ ಮೂಲಕ ಪಶ್ಚಿಮ ಬಂಗಾಲವನ್ನು ಅವಮಾನಿಸಬೇಡಿ' ಎಂದು ಬ್ಯಾನರ್ಜಿ ಉತ್ತರಿಸಿದ್ದಾರೆ.

ಬಂಗಾಲವು ಅದಕ್ಕೆ ಏನು ಬರಬೇಕೋ ಅದನ್ನು ಪಡೆದುಕೊಳ್ಳುತ್ತದೆ. ಇತರ ರಾಜ್ಯಗಳು ಕೂಡ ತಮ್ಮ ಪಾಲಿನ ಯೋಜನೆಗಳನ್ನು ಪಡೆದುಕೊಳ್ಳುತ್ತವೆ. ಇತರ ರಾಜ್ಯಗಳ ಪಾಲನ್ನು ನಾನು ಕಡಿತಗೊಳಿಸಿಲ್ಲ ಎಂದು ಅವರು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮ ಪ್ರಶ್ನೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.

ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ಭಾಷಣ ಮಾಡುತ್ತಿದ್ದಾಗ ಸಂಸದರು ಭಾರೀ ಅಡೆತಡೆಗಳನ್ನೊಡ್ಡಿದ್ದನ್ನು ಪ್ರಸ್ತಾಪಿಸಿದ ಮಮತಾ, ನಾನು 800 ವ್ಯಕ್ತಿಗಳನ್ನು ಸಂತುಷ್ಟಗೊಳಿಸುವುದು ಅಸಾಧ್ಯ. ಒರಿಸ್ಸಾ, ಆಂಧ್ರಪ್ರದೇಶ, ಗುವಾಹತಿಗಳಿಗೆ ನಾನು ವ್ಯಾಗನ್ ಉದ್ಯಮವನ್ನು ನೀಡಿದ್ದೇನೆ. ಇತರ ರಾಜ್ಯಗಳಿಗೂ ಸಾಕಷ್ಟು ಯೋಜನೆಗಳನ್ನು ಹಂಚಿದ್ದೇನೆ ಎಂದರು.

ಪಶ್ಚಿಮ ಬಂಗಾಲವನ್ನು ಅಭಿವೃದ್ಧಿಯಿಂದ ಹೊರಗಿಡಲು ಸಾಧ್ಯವಿಲ್ಲ. ಇತರ ಸಚಿವರುಗಳು ತಮ್ಮ ತವರು ರಾಜ್ಯವನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ ಅದೇ ರೀತಿ ನಾನೂ ನಡೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ರೈಲ್ವೇ ಸಚಿವರು ತನ್ನ ಭಾಷಣದಲ್ಲಿ ಕೆಲವು ತಪ್ಪು ಮಾಹಿತಿಗಳನ್ನೂ ನೀಡಿದರು. ಆದರೆ ತಕ್ಷಣವೇ ಇದನ್ನು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಸರಿಪಡಿಸಿದ್ದಾರೆ.

'ಮಿಲಿಯನ್ ಟನ್' ಎಂದು ಹೇಳುವ ಬದಲು 'ಮೆಟ್ರಿಕ್ ಟನ್' ಎಂದು ಭಾಷಣದಲ್ಲಿ ಹೇಳಿದ್ದನ್ನು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮತ್ತು ಕೃಷಿ ಸಚಿವ ಶರದ್ ಪವಾರ್ ತಿದ್ದಿದರು.

ಹೊಸ ಯೋಜನೆಗಳು ಮತ್ತು ಹೊಸ ರೈಲು ಮಾರ್ಗಗಳನ್ನು ಪ್ರಕಟಿಸುವಾಗ ಕೆಲವು ಸ್ಥಳಗಳ ಹೆಸರುಗಳನ್ನು ಸರಿಯಾಗಿ ಉಚ್ಛರಿಸದೇ ಇರುವುದಕ್ಕೆ ಕೂಡ ಬ್ಯಾನರ್ಜಿ ಸಂಸದರಲ್ಲಿ ಕ್ಷಮೆ ಯಾಚಿಸಿದ್ದಾರೆ. ನನ್ನ ಉಚ್ಛಾರಣೆ ತಪ್ಪಾಗಿದ್ದರೆ ಗಲಾಟೆ ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ