ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಡ್ಲಿ ರಕ್ಷಣಾ ಸಚಿವಾಲಯದ 'ರಕ್ಷಾಭವನ'ಕ್ಕೂ ನುಗ್ಗಿದ್ದ: ಎಫ್‌ಬಿಐ (Raksha Bhavan | FBI | Defence Ministry | David Headley)
Bookmark and Share Feedback Print
 
2009ರ ಮಾರ್ಚ್ ತಿಂಗಳಲ್ಲಿ ಡೇವಿಡ್ ಹೆಡ್ಲಿ ಪುಣೆಗೆ ಭೇಟಿ ನೀಡಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯನ್ನು ಚಿತ್ರೀಕರಣ ನಡೆಸಿದ್ದು ಮಾತ್ರವಲ್ಲ, ಆತ ರಕ್ಷಣಾ ಸಚಿವಾಲಯದ ರಕ್ಷಾಭವನಕ್ಕೂ ನುಗ್ಗಿದ್ದ ಎಂದು ಅಮೆರಿಕಾದ ಎಫ್‌ಬಿಐ ಬಹಿರಂಗಪಡಿಸಿದೆ.

ಭಾರತ ಪ್ರವಾಸದಲ್ಲಿರುವ ಎಫ್‌ಬಿಐ ನಿರ್ದೇಶಕ ರಾಬರ್ಟ್ ಮುಲ್ಲರ್ ಗೃಹಸಚಿವ ಪಿ. ಚಿದಂಬರಂ ಮತ್ತು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಲಷ್ಕರ್ ಇ ತೋಯ್ಬಾದ ಶಂಕಿತ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಗೆ ಪುಣೆ ಸ್ಫೋಟದ ಬಗ್ಗೆ ಹೊಂದಿರಬಹುದಾದ ಮಾಹಿತಿಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಾಹಿತಿಗಳನ್ನು ಅವರು ಭಾರತಕ್ಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಷ್ಟ್ರೀಯ ತನಿಖಾ ದಳದ ಪ್ರಧಾನ ನಿರ್ದೇಶಕ ಎಸ್.ಸಿ. ಸಿನ್ಹಾ, ಬೇಹುಗಾರಿಕಾ ವಿಭಾಗದ ನಿರ್ದೇಶಕ ರಾಜೀವ್ ಮಾಥುರ್ ಮತ್ತು ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಕೂಡ ಅಮೆರಿಕಾ ಹಿರಿಯ ಅಧಿಕಾರಿಗಳ ಜತೆಗಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಅಮೆರಿಕಾ ವಶದಲ್ಲಿರುವ ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿ ಹೆಡ್ಲಿ, ಪುಣೆ ಜರ್ಮನ್ ಬೇಕರಿ ಸ್ಫೋಟದ ಸಂಬಂಧ ಹೊಂದಿರಬಹುದಾದ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಆತನನ್ನು ಭಾರತದ ಕೈಗೊಪ್ಪಿಸುವ ಪ್ರಸ್ತಾಪವನ್ನು ಅಮೆರಿಕಾ ನಿರಾಕರಿಸಿದೆಯಾದರೂ, ವಿಚಾರಣೆಗೆ ಅವಕಾಶ ನೀಡುವ ಸಾಧ್ಯಾಸಾಧ್ಯತೆಗಳ ಕುರಿತು ಮಾತುಕತೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.

ಜರ್ಮನ್ ಬೇಕರಿಗೆ ಬೆದರಿಕೆ ಇರುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದ್ದರೂ, ಅದನ್ನು ನಿರ್ಲಕ್ಷಿಸಲಾಗಿತ್ತು ಎಂದು ಪುಣೆ ಪೊಲೀಸರು ಇದೇ ಹೊತ್ತಿನಲ್ಲಿ ಬಹಿರಂಗಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ