ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದು ಭಾರತ-ಪಾಕ್ ಮಾತುಕತೆ: ಆಶಾವಾದವೇ ಫಲಿತಾಂಶ? (Zaki-ur-Rehman Lakhvi | P Chidambaram | Salman Bashir | Foreign Secretary level talks)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ನಂತರ ಸ್ಥಗಿತಗೊಂಡಿದ್ದ ಭಾರತ-ಪಾಕಿಸ್ತಾನಗಳ ನಡುವಿನ ಮಾತುಕತೆ ಇಂದು ವಿದೇಶಾಂಗ ಕಾರ್ಯದರ್ಶಿಗಳ ಮೂಲಕ ಪುನಶ್ಚೇತನ ಪಡೆಯುತ್ತಿದ್ದು, ಫಲಿತಾಂಶಗಳ ಬಗ್ಗೆ ಭಾರತ ಹೆಚ್ಚು ನಿರೀಕ್ಷೆಗಳನ್ನು ಹೊಂದಿಲ್ಲ ಎಂದು ಹೇಳಿಕೊಂಡಿದೆ.

ನಿನ್ನೆ ತನ್ನ ಐದು ಮಂದಿಯ ನಿಯೋಗದೊಂದಿಗೆ ನವದೆಹಲಿಗೆ ಆಗಮಿಸಿರುವ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳಿಗೆ ತಾನು ಸೇತುವೆಯಾಗುವ ಆಶಯ ವ್ಯಕ್ತಪಡಿಸಿದ್ದಾರೆ. ಈ ಮಾತುಕತೆಯಿಂದ ಸಕಾರಾತ್ಮಕ ಫಲಿತಾಂಶ ನಿರೀಕ್ಷೆಯಲ್ಲಿರುವ ತನಗೆ ಯಶಸ್ಸು ಸಿಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

ಆದರೆ ಇತ್ತ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಭಾರತವು ಈ ಮಾತುಕತೆಯಿಂದ ಹೆಚ್ಚಿನ ನಿರೀಕ್ಷೆಗಳು ಕೈಗೂಡುತ್ತವೆ ಎಂಬ ವಿಶ್ವಾಸವನ್ನಿಟ್ಟುಕೊಂಡಿಲ್ಲ. ನಮ್ಮಲ್ಲಿ ಹೆಚ್ಚಿನ ಆಶಾವಾದಗಳಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರೊಂದಿಗೆ ಇಂದು ಬಷೀರ್ ಮಾತುಕತೆ ಆರಂಭಿಸಲಿದ್ದಾರೆ. ಬಳಿಕ ಅವರು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರನ್ನು ಕೂಡ ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತವು ಮಾತುಕತೆಯಲ್ಲಿ ಭಯೋತ್ಪಾದನೆಯನ್ನೇ ಪ್ರಮುಖ ಅಂಶವನ್ನಾಗಿಸುತ್ತದೆ ಎಂದು ಆರಂಭದಿಂದಲೇ ಹೇಳುತ್ತಾ ಬಂದಿದೆ. ಆದರೆ ಅತ್ತ ಪಾಕಿಸ್ತಾನವು ಕಾಶ್ಮೀರ ವಿಚಾರವನ್ನು ವಿವಾದವೆಂದು ಪರಿಗಣಿಸಿ ಮಾತುಕತೆಯಲ್ಲಿ ಸೇರಿಸಬೇಕು ಎಂದು ತಕರಾರು ತೆಗೆದಿತ್ತು. ಅಲ್ಲದೆ ಬಲೂಚಿಸ್ತಾನದಲ್ಲಿ ಭಾರತವು ಕೈಯಾಡಿಸುತ್ತಿದೆ ಎಂಬ ಆರೋಪವನ್ನೂ ಇದೇ ಸಂದರ್ಭದಲ್ಲಿ ಎತ್ತುವುದಾಗಿ ಹೇಳಿಕೊಂಡಿತ್ತು.

ಇತ್ತ ಪ್ರತಿಕ್ರಿಯಿಸಿದ್ದ ಭಾರತ, ಭಯೋತ್ಪಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಆ ದೇಶದ ಜತೆ ಸಮಗ್ರ ಮಾತುಕತೆ ಸಾಧ್ಯವಿಲ್ಲ. ಅವರು ಯಾವ ವಿಚಾರವನ್ನು ಬೇಕಾದರೂ ಪ್ರಸ್ತಾಪಿಸಲಿ. ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಝಾಕೀರ್ ರೆಹಮಾನ್ ಲಖ್ವಿಯನ್ನು ನಮ್ಮ ವಶಕ್ಕೆ ವಿಚಾರಣೆಗೆ ಒಪ್ಪಿಸಬೇಕೆಂದು ನಾವೂ ಕೇಳುತ್ತೇವೆ ಎಂದು ಹೇಳಿದೆ.

ಒಟ್ಟಾರೆ ಇಂದು ಸಂಜೆಯೊಳಗೆ ಬಹುನಿರೀಕ್ಷಿತ ಭಾರತ-ಪಾಕ್ ಮಾತುಕತೆಯ ಫಲಿತಾಂಶ ಬಹಿರಂಗವಾಗಲಿದೆ. ಇದು ಯಶಸ್ವಿಯಾದಲ್ಲಿ ಸಮಗ್ರ ಮಾತುಕತೆಯ ಬಾಗಿಲು ತೆರೆದುಕೊಳ್ಳಬಹುದು ಎನ್ನುವುದು ಪಾಕಿಸ್ತಾನದ ನಿರೀಕ್ಷೆ. ಭಾರತ ತಾನು ಸಮಗ್ರ ಮಾತುಕತೆಯ ಹಾದಿ ತುಳಿಯಬೇಕಾದರೆ ಪಾಕಿಸ್ತಾನ ಈ ಹಿಂದೆ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಹೇಳಿಕೊಂಡು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ