ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂ.ಎಫ್. ಹುಸೇನ್‌ಗೆ ಕತಾರ್ ಪೌರತ್ವ; ಭಾರತಕ್ಕೆ ಗುಡ್‌ಬೈ? (India | MF Husain | Qatar citizenship | Maqboool Fida Husain)
Bookmark and Share Feedback Print
 
MF Husain Art-letter
PR
ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲೇ ಉಳಿದುಕೊಂಡಿರುವ ಭಾರತದ ವಿವಾದಿತ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ಅವರಿಗೆ ಕತಾರ್ ತನ್ನ ಪೌರತ್ವವನ್ನು ನೀಡಿದ್ದು, ಭಾರತದ ನಾಗರಿಕತ್ವ ಹಿಂತಿರುಗಿಸಲಿದ್ದಾರೆ ಎಂದು ವರದಿಗಳು ಹೇಳಿವೆ.

ಕುತೂಹಲಕಾರಿ ವಿಚಾರವೆಂದರೆ ಹುಸೇನ್ ತನಗೆ ಪೌರತ್ವ ಬೇಕೆಂದು ಕತಾರ್ ಸರಕಾರಕ್ಕೆ ಮನವಿ ಸಲ್ಲಿಸಿರಲಿಲ್ಲ. ಕತಾರ್‌ನ ಆಡಳಿತಾರೂಢ ರಾಜಮನೆತನವು ಗೌರವಪೂರ್ವಕವಾಗಿ ತನ್ನ ದೇಶದ ಪೌರತ್ವವನ್ನು ಹುಸೇನ್ ಅವರಿಗೆ ನೀಡಿದೆ.

ಆದರೆ ಭಾರತದ ನಿಯಮಾವಳಿಗಳ ಪ್ರಕಾರ ಭಾರತೀಯನೊಬ್ಬ ಎರಡು ದೇಶಗಳ ಪೌರತ್ವ ಹೊಂದುವಂತಿಲ್ಲ. ಹುಸೇನ್ ಕತಾರ್ ಪೌರತ್ವವನ್ನೇ ಬಯಸುವುದಾದಲ್ಲಿ ಅವರು ತನ್ನ ಜನ್ಮಭೂಮಿ, ಕರ್ಮಭೂಮಿ ಭಾರತದ ಪೌರತ್ವವನ್ನು ತ್ಯಜಿಸಬೇಕಾಗುತ್ತದೆ. ಈ ಕುರಿತು ಇನ್ನೂ ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಗಳು ಹೇಳಿವೆ.

ಕತಾರ್ ರಾಷ್ಟ್ರೀಯತೆಯನ್ನು ನನಗೆ ಗೌರವ ಪೂರ್ವಕವಾಗಿ ನೀಡಲಾಗಿದೆ. ಆದರೆ ನನ್ನ ಬಲವಂತದ ಗಡೀಪಾರು ನನ್ನನ್ನು ತೀವ್ರವಾಗಿ ನೋಯಿಸಿದೆ. ಕತಾರ್ ಪೌರತ್ವವನ್ನು ನಾನು ಸ್ವೀಕರಿಸಿದಲ್ಲಿ ಭಾರತೀಯ ಕಲಾವಿದನಾದ ನಾನು ನನ್ನ ಜನ್ಮಭೂಮಿಯ ರಾಷ್ಟ್ರೀಯತೆಯನ್ನು ತ್ಯಜಿಸಬೇಕಾಗುತ್ತದೆ ಎಂದು ಹುಸೇನ್ ಹೇಳಿದ್ದಾರೆಂದು 'ದಿ ಹಿಂದೂ' ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ. (ಹಿಂದೂ ಪತ್ರಿಕೆಗೆ ಹುಸೇನ್ ಕಳುಹಿಸಿರುವ ಕಲಾಕೃತಿ-ಮಾಹಿತಿಯನ್ನು ಚಿತ್ರದಲ್ಲಿ ಗಮನಿಸಿ)

ಸಾಗರೋತ್ತರ ಭಾರತೀಯ ಪೌರತ್ವ ನಿಯಮವಿದ್ದರೂ, ಭಾರತದ ನಿಯಮಗಳ ಪ್ರಕಾರ ದ್ವಿಪೌರತ್ವ ಹೊಂದಲು ಅವಕಾಶ ಇಲ್ಲ. ಕತಾರ್ ಪೌರತ್ವ ಸ್ವೀಕಾರ ಸಂಬಂಧ ಪ್ರಕ್ರಿಯೆಗಳು ಮುಗಿದ ಬಳಿಕ ಅವರು ಸಾಗರೋತ್ತರ ಭಾರತೀಯ ಪೌರತ್ವ ನಿಯಮಗಳನ್ನು ಅನುಸರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಅವರು ತನ್ನ ಭಾರತೀಯ ಪಾಸ್‌ಪೋರ್ಟನ್ನು ಹಿಂತಿರುಗಿಸಬೇಕಾಗುತ್ತದೆ.

ಹಿಂದೂ ದೇವತೆಗಳ ವಿರುದ್ಧ ಕೆಟ್ಟದಾಗಿ ಚಿತ್ರ ಬರೆಯುತ್ತಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 900ಕ್ಕೂ ಪ್ರಕರಣಗಳು ಅವರ ಮೇಲೆ ದಾಖಲಾಗಿರುವುದರಿಂದ ಭಾರತ ತೊರೆದಿದ್ದ ಅವರು ಬಂಧನ ಭೀತಿಯಿಂದ ಮತ್ತೆ ಇಲ್ಲಿಗೆ ವಾಪಸಾಗಲು ಹಿಂಜರಿಯುತ್ತಿದ್ದಾರೆ.

'ಭಾರತ ಮಾತೆ' ಎಂಬ ತನ್ನ ಕಲಾಕೃತಿಯಿಂದ ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜನಜಾಗೃತಿ ಸಮಿತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆತ್ತಲೆ ಮಹಿಳೆಯ ಚಿತ್ರವನ್ನು ಭಾರತದ ನಕ್ಷೆಯ ನಡುವೆ ಬಿಡಿಸಿದ್ದ ಈ ಕಲಾಕೃತಿ ಭಾರೀ ವಿವಾದ ಸೃಷ್ಟಿಸಿತ್ತು. ಅಲ್ಲದೆ ಇತರ ಹಲವು ಹಿಂದೂ ದೇವತೆಗಳ ಚಿತ್ರಗಳನ್ನೂ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪಗಳು ಅವರ ಮೇಲಿವೆ.

ನನಗೆ ಭಾರತದ ನೆನಪುಗಳು ಕಾಡುತ್ತಿವೆ. ಅಲ್ಲಿಗೆ ಮರಳಬೇಕೆಂಬ ಆಸೆ ಹೆಚ್ಚುತ್ತಿದೆ. ಆದರೆ ಅಲ್ಲಿಗೆ ವಾಪಸ್ ಹೋಗಲಾರೆ. ಯಾಕೆಂದರೆ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು 'ದುಬೈ ಮಾಡರ್ನ್ ಹೈಸ್ಕೂಲ್'ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹುಸೇನ್ ಇತ್ತೀಚೆಗಷ್ಟೇ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ