ಪುಣೆ ಸ್ಫೋಟ ನಡೆಸಿದ್ದು ಸಿಮಿ ಮತ್ತು ಮುಜಾಹಿದೀನ್: ಪೊಲೀಸ್
ಪುಣೆ, ಗುರುವಾರ, 25 ಫೆಬ್ರವರಿ 2010( 10:35 IST )
ಫೆಬ್ರವರಿ 13ರಂದು ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಹೊಣೆಯನ್ನು ನಿಷೇಧಿತ ಸಿಮಿ ಮತ್ತು ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗಳು ಹೊತ್ತುಕೊಂಡಿವೆ ಎಂದು ಪುಣೆ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.
ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿ ಚಳುವಳಿ (ಸಿಮಿ) ಮತ್ತು ಇಂಡಿಯನ್ ಮುಜಾಹಿದೀನ್ ಸಂಘಟನೆಗಳು ಈ ಕೃತ್ಯವನ್ನು ನಾವೇ ನಡೆಸಿದ್ದು ಎಂದು ಪ್ರತ್ಯೇಕವಾಗಿ ಎರಡು ಪತ್ರಗಳನ್ನು ನಮಗೆ ಕಳುಹಿಸಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ ಸಿಂಗ್, ಅದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಪುಣೆ ಸ್ಫೋಟ ಸಂಬಂಧ ಹಲವು ಪತ್ರಗಳು ನಮಗೆ ಬರುತ್ತಿವೆ. ಆದರೆ ಅವುಗಳಲ್ಲಿ ಎರಡು ಪತ್ರಗಳು ನೈಜವೆಂದು ಕಂಡು ಬಂದಿವೆ. 'ಸಿಮಿ ಇಂಟರ್ ನ್ಯಾಷನಲ್' ಮತ್ತು 'ಮುಜಾಹಿದೀನ್ ಇಸ್ಲಾಮಿಕ್ ಮುಸ್ಲಿಂ ಫ್ರಂಟ್' ಎಂಬ ಹೆಸರುಗಳಲ್ಲಿ ಪತ್ರಗಳು ಬಂದಿವೆ ಎಂದು ಸಿಂಗ್ ತಿಳಿಸಿದ್ದಾರೆ.
ಕೊರೆಗಾನ್ ಪಾರ್ಕ್ ಪ್ರದೇಶದಲ್ಲಿನ ಜರ್ಮನ್ ಬೇಕರಿ ಮೇಲೆ ಶನಿವಾರ ನಡೆದ ದಾಳಿಯಿಂದಾಗಿ 16 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
PTI
ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಾದ ಉತ್ತರ ಕನ್ನಡ ಜಿಲ್ಲೆಯ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಹೆಸರುಗಳು ಆರಂಭದಿಂದಲೇ ಪುಣೆ ಪ್ರಕರಣದಲ್ಲಿ ಥಳಕು ಹಾಕಿಕೊಂಡಿತ್ತು. ಈ ಹಿಂದಿನ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ಸೇರಿದಂತೆ ಹಲವು ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಾಮ್ಯತೆಯಿದ್ದ ಕಾರಣ ಇವರ ಕಡೆ ಹೆಚ್ಚು ಅನುಮಾನಗಳಿದ್ದವು. ಇದೀಗ ಪುಣೆ ಪೊಲೀಸರ ಹೇಳಿಕೆಯೊಂದಿಗೆ ಇದು 'ಸಿಮಿ'ಯ ರೂಪಾಂತರ ಸಂಘಟನೆ ಇಂಡಿಯನ್ ಮುಜಾಹಿದೀನ್ ಕೃತ್ಯ ಎಂಬುದು ಬಹುತೇಕ ಖಚಿತವಾಗಿದೆ.
ದುಷ್ಕೃತ್ಯ ಸಂಬಂಧ ಈಗಾಗಲೇ ಮುಂಬೈ, ಪುಣೆ, ಬೆಂಗಳೂರು, ಹಂಪಿ, ಭಟ್ಕಳ ಸೇರಿದಂತೆ ದೇಶದ ವಿವಿಧೆಡೆಗಳಿಂದ 40ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಆದರೆ ಮಾಹಿತಿಗಳನ್ನು ತನಿಖಾದಳಗಳು ಗೌಪ್ಯವಾಗಿಡುತ್ತಿವೆ.
ಇಂಡಿಯನ್ ಮುಜಾಹಿದೀನ್ ಸಂಘಟನೆಯು ಲಷ್ಕರ್ ಇ ತೋಯ್ಬಾ ಸಂಘಟನೆಯ ಸಹಕಾರದಿಂದ 'ಕರಾಚಿ ಪ್ರೊಜೆಕ್ಟ್' ಅಡಿಯಲ್ಲಿ ಈ ಕೃತ್ಯವನ್ನು ನಡೆಸಿದೆ ಎಂದು ನಂಬಲಾಗಿದೆ. ಇಲ್ಲಿ ಪಾಕ್ ಮೂಲದ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿಯ ಹೆಜ್ಜೆ ಗುರುತುಗಳು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿದ್ದವು. ಆತ ಪುಣೆಗೆ ಭೇಟಿ ನೀಡಿ ದಾಳಿಯ ಸ್ಥಳವನ್ನು ಗುರುತಿಸಿದ್ದ ಎಂದು ಮೂಲಗಳು ಹೇಳಿವೆ.
ವೀಡಿಯೋ ಪ್ರಸಾರ ಮಾಡಬೇಡಿ.... ಭಯೋತ್ಪಾದಕರ ದಾಳಿಗೊಳಗಾದ ಜರ್ಮನ್ ಬೇಕರಿಗೆ ಸಂಬಂಧಪಟ್ಟ ಸಿಸಿಟಿವಿ ತುಣುಕುಗಳನ್ನು ಪ್ರಸಾರ ಮಾಡದಂತೆ ವಾರ್ತಾವಾಹಿನಿಗಳಿಗೆ ಪುಣೆಯ ನ್ಯಾಯಾಲಯ ಆದೇಶ ನೀಡಿದೆ.
ಈ ಆದೇಶ ಪಕ್ಕದ ಪಂಚತಾರಾ ಹೊಟೇಲಿನಲ್ಲಿ ದಾಖಲಾಗಿರುವ ಬೇಕರಿ ದೃಶ್ಯಗಳನ್ನು ತೋರಿಸುವ ಸಿಸಿಟಿವಿ ತುಣುಕುಗಳಿಗೂ ಅನ್ವಯಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.