ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆ ಏರಿಕೆ: ತನ್ನ ಯುಪಿಎ ವಿರುದ್ಧವೇ ಕಾಂಗ್ರೆಸ್ ಕೆಂಡ! (Price rise | UPA govt | Sharad Pawar | Congress Sandesh)
Bookmark and Share Feedback Print
 
ಉತ್ಪಾದನೆ ಕೊರತೆ ನಿವಾರಣೆಯಾಗಿರುವ ಹೊರತಾಗಿಯೂ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದಕ್ಕೆ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಬೆನ್ನಿಗೆ ಕಾಂಗ್ರೆಸ್ ಕೂಡ ಅದೇ ಹಾದಿ ತುಳಿದಿದೆ. ಕಳೆದೊಂದು ದಶಕದಿಂದ ಸೋನಿಯಾ ಗಾಂಧಿಯವರು ಪಟ್ಟ ಶ್ರಮವನ್ನು ಕೇಂದ್ರದ ಪ್ರಜಾಸತ್ತಾತ್ಮಕ ಮೈತ್ರಿಕೂಟದ ವೈಫಲ್ಯವು ನುಚ್ಚುನೂರು ಮಾಡುತ್ತಿದೆ ಎಂದು ಹೇಳಿದೆ.

ಹಣದುಬ್ಬರಕ್ಕೆ ಸಂಬಂಧಪಟ್ಟಂತೆ ಇತರ ಸಚಿವಾಲಯಗಳ ಜತೆ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಅತ್ಯುತ್ತಮ ಸಹಕಾರವನ್ನು ಹೊಂದಬೇಕು ಎಂದು ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಇದನ್ನು ಎನ್‌ಸಿಪಿ ಮುಖ್ಯಸ್ಥ ಹಾಗೂ ಕೇಂದ್ರ ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ ಅವರ ಕಾರ್ಯಚಟುವಟಿಕೆಗಳ ಮೇಲೆ ಪ್ರಧಾನ ಮಂತ್ರಿಗಳು ಕೈಯಾಡಿಸುವಂತೆ ನೀಡಿರುವ ಪರೋಕ್ಷ ಸಲಹೆ ಎಂದು ಪರಿಗಣಿಸಲಾಗುತ್ತಿದೆ.
PR


ಪ್ರಧಾನ ಮಂತ್ರಿ ಮತ್ತು ಇತರ ಸಚಿವಾಲಯಗಳ ನಡುವೆ ಅನ್ಯೋನ್ಯತೆ ಕಾಪಾಡಿಕೊಳ್ಳುವುದು ಕಷ್ಟವೆನಿಸಿದರೆ, ಬಡವರು ಮತ್ತು ಸಾಮಾನ್ಯ ಜನತೆಯ ಕಷ್ಟಗಳನ್ನು ಪರಿಹರಿಸುವುದನ್ನು ಪ್ರಥಮ ಪ್ರಾಶಸ್ತ್ಯವೆಂದು ಸ್ವೀಕರಿಸಿ. ಬಡವರು ಮತ್ತು ಸಾಮಾನ್ಯ ಜನತೆಯ ಮುಖದಲ್ಲಿರುವ ಬೆವರನ್ನು ಒರೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸರಕಾರಕ್ಕೆ ಹೇಳಿದೆ.

ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊತ್ತ ಮೊದಲ ಬಾರಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ಮುಖವಾಣಿ 'ಕಾಂಗ್ರೆಸ್ ಸಂದೇಶ್', ಹಣದುಬ್ಬರವನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂಬುದನ್ನು ಒತ್ತಿ ಹೇಳಿದೆ.

ಸಾಮಾನ್ಯ ಜನರಿಗೆ ನೇರವಾಗಿ ಸಂಬಂಧಪಟ್ಟ ವಿಚಾರಗಳಲ್ಲಿ ವ್ಯವಹರಿಸುವಾಗ ಅಜಾಗರೂಕತೆ ವಹಿಸಿದರೆ ಅದು ತೀರಾ ದುಬಾರಿಯಾಗಿ ಪರಿಣಮಿಸಬಹುದು ಮತ್ತು ಚಿಕ್ಕ ವಿಚಾರಗಳು ಕೂಡ ಅಗಾಧ ಶ್ರಮವನ್ನು ವ್ಯರ್ಥಗೊಳಿಸಬಹುದು ಎಂದು 'ಸಂದೇಶ್'ನ ಇತ್ತೀಚಿನ ಸಂಚಿಕೆಯ ಸಂಪಾದಕೀಯದಲ್ಲಿ ಸರಕಾರಕ್ಕೆ ಸಲಹೆ ನೀಡಲಾಗಿದೆ.

ಶರದ್ ಪವಾರ್ ಬಗ್ಗೆ ನೇರ ಟೀಕೆಗಳನ್ನು ಮಾಡದಿದ್ದರೂ, ಇತರ ಸಚಿವಾಲಯಗಳ ಜತೆ ಸಂಪರ್ಕ ಕೊರತೆಯಿರುವುದನ್ನು ಕಾಂಗ್ರೆಸ್ ಬೆಟ್ಟು ಮಾಡಿ ತೋರಿಸಿದೆ. ಪವಾರ್ ಅವರ ಕಾರ್ಯಚಟುವಟಿಕೆಗಳನ್ನು ಪ್ರಧಾನ ಹುದ್ದೆಗಳಲ್ಲಿರುವವರು ನಿಯಂತ್ರಿಸಬೇಕು ಎಂದೂ ಪರೋಕ್ಷ ಸಲಹೆಗಳನ್ನು ನೀಡಲಾಗಿದೆ.

ದೇಶದಲ್ಲಿ ಬೆಲೆಯೇರಿಕೆ ಪ್ರಮುಖ ಸಮಸ್ಯೆಯಾಗಿರುವ ಹೊತ್ತಿನಲ್ಲೇ ಐರೋಪ್ಯ ಒಕ್ಕೂಟಕ್ಕೆ 10,000 ಟನ್ ಸಕ್ಕರೆ ರಫ್ತು ಮಾಡುವ ನಿರ್ಧಾರಕ್ಕೆ ಬಂದಿದ್ದ ಸರಕಾರದ ತೀರ್ಮಾನವನ್ನೂ ಇತ್ತೀಚೆಗೆ ಕಾಂಗ್ರೆಸ್‌ನ ಹಲವು ಘಟಕಗಳು ವಿರೋಧಿಸಿದ್ದವು. ಈ ಸಂಬಂಧ ಪವಾರ್ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಲಾಗಿತ್ತು. ಬಳಿಕ ಈ ರಫ್ತು ಒಪ್ಪಂದವನ್ನು ರದ್ದುಗೊಳಿಸಲಾಯಿತು ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ