ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಷ್ಮಾ ಚಾಟಿ ಬೀಸುತ್ತಿದ್ದರೆ 'ಸಕ್ಕರೆ ಸಾಮ್ರಾಟ' ಪವಾರ್ ನಗುತ್ತಿದ್ದರು! (Lok Sabha | Sushma Swaraj | Central government | Sharad Pawar)
ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದರೆ, ಇತ್ತ ಸೋನಿಯಾ ಗಾಂಧಿ ಪಕ್ಕವೇ ಕುಳಿತಿದ್ದ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಬಿಜೆಪಿ ನಾಯಕಿಯ ಭಾಷಣದುದ್ದಕ್ಕೂ ಏನೂ ಆಗಿಲ್ಲ ಎಂಬಂತೆ ನಗುತ್ತಾ ಅಚ್ಚರಿ ಹುಟ್ಟಿಸಿದರು.
ಆಹಾರ ಪದಾರ್ಥಗಳ ಬೆಲೆಯೇರಿಕೆಯ ಕುರಿತ ಚರ್ಚೆ ಆರಂಭಿಸಿದ ಸುಷ್ಮಾ, ಒಂದು ಹಂತದಲ್ಲಿ ಆಕ್ರೋಶದಿಂದಲೇ ಪವಾರ್ ಅವರ ಮೇಲೆ ಪರೋಕ್ಷ ದಾಳಿ ನಡೆಸಿದರು. 'ಪವಾರ್ ಅವರನ್ನು ನಗಲು ಬಿಡಿ. ಅವರ ನಗುವಿನತ್ತ ನೋಡಬೇಡಿ. ಸರಕಾರದ ಕೆಟ್ಟ ನೀತಿಗಳಿಂದಾಗಿ ಸಂಕಷ್ಟ ಎದುರಿಸುತ್ತಿರುವ ಬಡವರ ಕಣ್ಣೀರನ್ನು ನೋಡಿ. ಅವರು ನಗಲಿ ಬಿಡಿ' ಎಂದರು.
ಸಕ್ಕರೆ ಬೆಲೆಯ ಬಗ್ಗೆ ಕೃಷಿ ಸಚಿವರನ್ನು 'ಸಕ್ಕರೆ ಸಾಮ್ರಾಟ' ಎಂದೇ ಬಿರುದು ನೀಡಿ ಮಾತನಾಡಿದ ಸುಶ್ಮಾ, ಸಕ್ಕರೆ, ಕಬ್ಬು ಉತ್ಪಾದನೆಯಿಂದ ಹಿಡಿದು ರಫ್ತು-ಆಮದು ಸಹಿತ ಸಂಪೂರ್ಣ ನಿಯಂತ್ರಣ ಇರುವುದು ಸರಕಾರದ ಕೈಯಲ್ಲಿ. ಶರದ್ ಪವಾರ್ ಅವರಿಗೇ ಈ ವಿಷಯ ಗೊತ್ತಿದೆ. ಅವರೇ ಸಕ್ಕರೆಯ ಸಾಮ್ರಾಟ. ಹೀಗಿದ್ದೂ ಕೂಡ ಸಕ್ಕರೆ ಬೆಲೆ ನಿಯಂತ್ರಣಕ್ಕೆ ಸರಕಾರ ಮುಗ್ಗರಿಸಿತೇಕೆ? ಕಿಲೋಗೆ 50 ರೂ.ವರೆಗೂ ಏರಿತೇಕೆ ಎಂದು ಪ್ರಶ್ನಿಸಿದರು.
ನಿಲುವಳಿ ಗೊತ್ತುವಳಿ ಅಡಿಯಲ್ಲಿ ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂಬ ವಿರೋಧಪಕ್ಷಗಳ ಆಗ್ರಹವನ್ನು ಸ್ಪೀಕರ್ ಮೀರಾ ಕುಮಾರ್ ತಳ್ಳಿ ಹಾಕಿದ ಬಳಿಕ ಸಂಸತ್ತಿನ ಎರಡೂ ಸದನಗಳಲ್ಲಿ ನಿಲುವಳಿ ಸೂಚನೆಗೆ ಅವಕಾಶವಿಲ್ಲದ ಚರ್ಚೆ ನಡೆಸಲು ವಿರೋಧಪಕ್ಷ ಒಪ್ಪಿಕೊಂಡು ಸಾಮಾನ್ಯ ಚರ್ಚೆ ಆರಂಭಿಸಲಾಗಿತ್ತು.
ಲೋಕಸಭೆ ವಿರೋಧಪಕ್ಷದ ನಾಯಕಿಯಾದ ನಂತರ ಮೊತ್ತ ಮೊದಲ ಭಾಷಣ ಮಾಡಿದ ಸುಷ್ಮಾ ತನ್ನ ಭಾಷಣದುದ್ದಕ್ಕೂ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಟೀಕಿಸುತ್ತಾ, ಬೆಲೆಯೇರಿಕೆಯ ಹಿಂದೆ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಯಾವುದೇ ಅಡೆತಡೆಯಿಲ್ಲದೆ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಪ್ರಜಾಸತ್ತಾತ್ಮಕ ಮೈತ್ರಿ ಕೂಟ ಸರಕಾರವು ಸಂಪೂರ್ಣ ವಿಫಲವಾಗಿದೆ. ಸರಕಾರದ ಆರ್ಥಿಕ ನಿಯಮಗಳ ವೈಫಲ್ಯದ ಫಲಿತಾಂಶವಿದು. ಗೋಧಿ, ಅಕ್ಕಿ, ಸಕ್ಕರೆ, ಬೇಳೆಕಾಳುಗಳ ಬೆಲೆ ಕಳೆದ ಕೆಲವು ತಿಂಗಳುಗಳಲ್ಲಿ ದ್ವಿಗುಣಗೊಂಡಿದೆ. ನಮ್ಮಲ್ಲಿ ಹೆಚ್ಚುವರಿ ಸಕ್ಕರೆ ದಾಸ್ತಾನು ಇದ್ದರೂ, ದಾಸ್ತಾನು ಕಾಯ್ದಿಡಲು ಕೃಷಿ ಸಚಿವರು ವಿಫಲರಾಗಿದ್ದಾರೆ ಎಂದು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪ್ರಧಾನ ಮಂತ್ರಿಯವರು ಹಣದುಬ್ಬರ ದರ ಮತ್ತು ಪ್ರಗತಿ ದರವನ್ನು ಹೋಲಿಸಿ ನೋಡಬೇಕು. ಪ್ರಗತಿ ದರವು ಗಳಿಕೆಯತ್ತ ಸಾಗುತ್ತಿದೆ. ಆದರೆ ಹಣದುಬ್ಬರ ದರವು ಹಲವರನ್ನು ಬಲಿ ಪಡೆದುಕೊಳ್ಳುತ್ತಿದೆ ಎಂದು ಸುಷ್ಮಾ ಹೇಳಿದರು.