ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೆಕ್ಚರ್ ಬೇಕಿಲ್ಲ, ಭಾರತ ಕೊಟ್ಟದ್ದು ಸಾಹಿತ್ಯ ತುಣುಕು: ಪಾಕ್! (India Pakistan Discussion | Dossier | Terror | Nirupama Rao | Indo-Pak Relation)
ಲೆಕ್ಚರ್ ಬೇಕಿಲ್ಲ, ಭಾರತ ಕೊಟ್ಟದ್ದು ಸಾಹಿತ್ಯ ತುಣುಕು: ಪಾಕ್!
ನವದೆಹಲಿ, ಗುರುವಾರ, 25 ಫೆಬ್ರವರಿ 2010( 20:55 IST )
PTI
ಅಮೆರಿಕದ ಒತ್ತಡದಿಂದಾಗಿಯೇ ಭಾರತವು ಪಾಕಿಸ್ತಾನ ಜೊತೆ ಮಾತುಕತೆಗೆ ಸಿದ್ಧವಾಯಿತು ಎಂಬ ಆರೋಪದ ನಡುವೆ, 'ಭಾರತವನ್ನು ಮಾತುಕತೆಗೆ ಒಪ್ಪಿಸಿ ನಾವು ಸಾಧನೆ ಮಾಡಿದೆವು' ಎಂದೆಲ್ಲಾ ಬೊಗಳೆ ಬಿಟ್ಟಿದ್ದ ಪಾಕಿಸ್ತಾನದಿಂದ ಗುರುವಾರದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯ ಬಳಿಕವೂ ಅದೇ ನಿರೀಕ್ಷಿತ ಪ್ರತಿಕ್ರಿಯೆ ಬಂದಿದೆ.
ಭಾರತವು ನಮಗೆ ಲೆಕ್ಚರ್ ಕೊಡಬೇಕಿಲ್ಲ ಮತ್ತು 'ಪಾಕ್ ಹೀಗೆ ಮಾಡಬೇಕು, ಹಾಗೆ ಮಾಡಬೇಕು' ಎಂದೆಲ್ಲಾ ಹೇಳುವಂತಿಲ್ಲ ಎಂದಿರುವ ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಭಾರತದಲ್ಲಿ ಒಂದೇ 26/11 ಘಟನೆ ನಡೆದಿದ್ದರೆ, ಪಾಕಿಸ್ತಾನದಲ್ಲಿ ಇಂಥದ್ದು ಸಾವಿರಾರು ನಡೆಯುತ್ತಿವೆ ಎಂದಿದ್ದಾರೆ!
ಅಷ್ಟು ಮಾತ್ರವೇ? ಅಫ್ಘಾನಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಸ್ಥಿರತೆ ಸೃಷ್ಟಿಸಲು ಉಗ್ರಗಾಮಿಗಳಿಗೆ ಭಾರತವೇ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಾಧಾರಗಳಿವೆ ಎಂದೂ ಹೇಳಿಬಿಟ್ಟಿದ್ದಾರೆ!
ಅದೂ ಅಲ್ಲದೆ, ಮುಂಬೈ ದಾಳಿ ರೂವಾರಿ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಬಂಧನ ಕೋರಿ, ಅದಕ್ಕೆ ಭಾರತ ಗುರುವಾರ ಒದಗಿಸಿದ 3 ಸಾಕ್ಷ್ಯಾಧಾರ ಕಡತಗಳನ್ನು 'ಇದು ಕೇವಲ ಸಾಹಿತ್ಯದ ತುಣುಕು ಅಷ್ಟೇ ಹೊರತು, ಸಾಕ್ಷ್ಯಾಧಾರ ಪತ್ರಗಳಲ್ಲ' ಎಂದೂ ತಿರಸ್ಕಾರವಾಡಿದ್ದಾರೆ. ನೆನಪಿಡಿ, ಇಂದಿನದೂ ಸೇರಿದಂತೆ ಇದುವರೆಗೆ ಭಾರತವು ಈ ರೀತಿಯಾಗಿ 10 ಸಾಕ್ಷ್ಯಾಧಾರ ಕಡತಗಳನ್ನು ಒಪ್ಪಿಸಿದ್ದರೂ, "ಇದೇನೂ ಸಾಲದು, ಇನ್ನೂ ಸಾಕ್ಷ್ಯಾಧಾರ ನೀಡಿ" ಅಂತ ಪಾಕಿಸ್ತಾನವು ಮತ್ತೆ ಮತ್ತೆ ಹೇಳುತ್ತಲೇ ಇದೆ!
ಇನ್ನೊಂದೆಡೆ, 26/11 ಮುಂಬೈ ದಾಳಿ ಮತ್ತು ಇತರ ಭಯೋತ್ಪಾದನಾ ಕೃತ್ಯಗಳಿಗೆಲ್ಲ ಭಾರತೀಯ ಟೆರರ್ ನೆಟ್‌ವರ್ಕ್‌ಗಳ ಸಹಕಾರವೇ ಕಾರಣ ಎಂದೂ ಪಾಕಿಸ್ತಾನದ ಆಂತರಿಕ ಸಚಿವ ರಹಮಾನ್ ಮಲಿಕ್ ಮತ್ತೊಮ್ಮೆ ತಮ್ಮ ಸಡಿಲ ನಾಲಿಗೆಯನ್ನು ಹೊರಬಿಟ್ಟಿದ್ದಾರೆ.
ಭಾರತ-ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ, ಕಾಶ್ಮೀರ ಒಳಗೊಳ್ಳಬೇಕು ಎಂದು ಪಾಕ್ ವಾದಿಸಿದ್ದರೆ, ಇಲ್ಲ, ಇಲ್ಲ, ಇದು ಭಯೋತ್ಪಾದನೆ ಬಗ್ಗೆ ಮಾತ್ರ ಎಂದು ಭಾರತ ವಾದಿಸುತ್ತಿತ್ತು. ಇದೀಗ, ಮಾತುಕತೆ ಮುಗಿಸಿದ ಬಳಿಕ ಹೇಳಿಕೆ ನೀಡಿದ ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಮಾತುಕತೆಯಲ್ಲಿ ಕಾಶ್ಮೀರ ವಿಷಯವನ್ನೇ ಹೆಚ್ಚು ಚರ್ಚಿಸಲಾಯಿತು ಎಂದಿದ್ದಾರೆ.
ಕಾಶ್ಮೀರ ವಿಷಯವನ್ನು ಸ್ಥೂಲವಾಗಿ ಅಲ್ಲ, ಸಮಗ್ರವಾಗಿಯೇ ಚರ್ಚಿಸಲಾಗಿದೆ. ಕಾಶ್ಮೀರ ವಿವಾದವನ್ನು ಯಾರು ಕೂಡ ತಳ್ಳಿ ಹಾಕಲಾಗದು. ಭಯೋತ್ಪಾದನೆ ವಿಷಯವನ್ನೇ ಹಿಡಿದುಕೊಂಡು ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಪ್ರಕ್ರಿಯೆಗೆ ತಡೆಯೊಡ್ಡುವುದು ಅಸಹಜ, ಅನ್ಯಾಯ ಮತ್ತು ಅನುತ್ಪಾದಕವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯೇ ನಮಗೆ ಬಹುದೊಡ್ಡ ಕಳವಳದ ಸಂಗತಿ ಎಂದಿದ್ದಾರೆ ಬಶೀರ್.
ಇದಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್, 26/11 ಹಂತಕ ಪಡೆಯ ವಿರುದ್ಧದ ಕ್ರಮಕ್ಕಾಗಿ ಪಾಕಿಸ್ತಾನಕ್ಕೆ ಇನ್ನೂ 3 ಸಾಕ್ಷ್ಯಾಧಾರಗಳ ಕಡತಗಳನ್ನು ಒಪ್ಪಿಸಿರುವುದಾಗಿ ತಿಳಿಸಿದ್ದಾರೆ. ಇವುಗಳು, ಪಾಕಿಸ್ತಾನದ ಹಾಲಿ ಸೇನಾಧಿಕಾರಿ ಮೇಜರ್ ಇಕ್ಬಾಲ್ (ಡೇವಿಡ್ ಹೆಡ್ಲಿಯನ್ನು ಅಮೆರಿಕದ ಎಫ್‌ಬಿಐ ವಿಚಾರಿಸಿದ ವೇಳೆ ಹೊರಬಂದ ಹೆಸರು) ಎಂಬಾತನ ಕೈವಾಡ, ಲಷ್ಕರ್-ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಸಹಿತ 8 ಮಂದಿಯ ಭಾಗೀದಾರಿ ಕುರಿತಾದ ಸಾಕ್ಷಿಗಳು, ಹಾಗೂ ಡೇವಿಡ್ ಹೆಡ್ಲಿಯ ಗುರು ಎನ್ನಲಾಗುತ್ತಿರುವ ಇಲ್ಯಾಸ್ ಕಾಶ್ಮೀರಿ ಹಾಗೂ ಇತರ ಮುಜಾಹಿದೀನ್ ಹಾಗೂ ಖಲಿಸ್ತಾನಿ ಉಗ್ರಗಾಮಿಗಳಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ನೀಡುತ್ತಿರುವ ಅಂಶಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒಳಗೊಂಡಿದ್ದವು.
ಮಾತುಕತೆಯ ಸಂದರ್ಭದಲ್ಲಿ ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಸ್ತಾಪಿಸಿದ್ದರೆ, ಪಾಕಿಸ್ತಾನವಂತೂ ತನ್ನ ಹಳೇ ರಾಗ ಎಳೆಯುತ್ತಾ, ಕಾಶ್ಮೀರ ವಿಷಯವನ್ನೂ, ಬಲೂಚಿಸ್ತಾನದಲ್ಲಿ ಭಾರತದ ಕೈವಾಡವಿದೆ ಎಂಬ ಹಳೇ ರಾಗವನ್ನೂ, ಜಲ ವಿವಾದವನ್ನೂ ಪ್ರಸ್ತಾಪಿಸಿತು.
ಇದೀಗ, ಪಾಕಿಸ್ತಾನದ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಮಾತುಕತೆಯು ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಪೂರಕವಾಗುವ ಬದಲು, ವಾಗ್ಯುದ್ಧಕ್ಕೆ ಕಾರಣವಾಗುತ್ತಿದೆ.