ತಿರುವನಂತಪುರಂ, ಶುಕ್ರವಾರ, 26 ಫೆಬ್ರವರಿ 2010( 08:35 IST )
ವಿವಾದಿತ ಕಲಾವಿದ ಎಂ.ಎಫ್. ಹುಸೇನ್ ಓರ್ವ ಭಾರತೀಯ ಪ್ರಜೆಯಾಗಿ ಮರಳಬಹುದು. ಅವರ ವಾಪಸಾತಿಯನ್ನು ನಾವು ಯಾಕೆ ವಿರೋಧಿಸಬೇಕು. ಆದರೆ ಹುಸೇನ್ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಆರೆಸ್ಸೆಸ್ ಹೇಳಿದ್ದರೆ, ಅತ್ತ ಕಾಂಗ್ರೆಸ್ ಪ್ರತಿಕ್ರಿಯಿಸುತ್ತಾ, ಹುಸೇನ್ ಭಾರತಕ್ಕೆ ವಾಪಸ್ಸಾಗುವುದಾದರೆ ಅಗತ್ಯ ಭದ್ರತೆ ನೀಡಲು ಸಿದ್ಧ ಎಂದು ಹೇಳಿದೆ.
ಓರ್ವ ಭಾರತೀಯ ಪ್ರಜೆಯಾಗಿ ಅವರು ಭಾರತಕ್ಕೆ ಮರಳುವುದನ್ನು ಆರೆಸ್ಸೆಸ್ ಸ್ವಾಗತಿಸುತ್ತದೆ. ನಾವ್ಯಾಕೆ ಅದನ್ನು ವಿರೋಧಿಸಬೇಕು. ಆದರೆ ಪ್ರತಿಯೊಬ್ಬ ಭಾರತೀಯನೂ ಇತರರ ಭಾವನೆಗಳನ್ನು ನೋಯಿಸಬಾರದು ಎಂಬುದರ ಬಗ್ಗೆ ಜಾಗರೂಕತೆ ವಹಿಸಬೇಕು. ಹುಸೇನ್ ಆ ರೀತಿ ನಡೆದುಕೊಂಡಿರುವುದಕ್ಕೆ ದೇಶದ ಕ್ಷಮೆ ಯಾಚಿಸಲಿ ಎಂದು ತಿರುವನಂತಪುರಂನಲ್ಲಿ ಮಾತನಾಡುತ್ತಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ತಿಳಿಸಿದ್ದಾರೆ.
PR
ಭಾರತದಲ್ಲಿ 900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ದೇಶದಿಂದ ಹೊರಗುಳಿದಿರುವ ಹುಸೇನ್ ಅವರಿಗೆ ಇದೀಗ ಕತಾರ್ ತನ್ನ ಪೌರತ್ವವನ್ನು ನೀಡಿದ್ದು, ಹುಸೇನ್ ಭಾರತೀಯ ರಾಷ್ಟ್ರೀಯತೆಯನ್ನು ತೊರೆಯುವ ಯೋಚನೆಯಲ್ಲಿದ್ದಾರೆ. ಹಿಂದೂ ದೇವತೆಗಳ ನಗ್ನ ಚಿತ್ರಗಳು ಸೇರಿದಂತೆ ಅಪಮಾನಕಾರಿಯಾಗಿ ಚಿತ್ರಿಸಿರುವ ಆರೋಪ ಹೊತ್ತಿರುವ ಅವರ ಮರಳುವಿಕೆಯನ್ನು ನೀವು ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಆರೆಸ್ಸೆಸ್ ಮುಖ್ಯಸ್ಥ ಉತ್ತರಿಸುತ್ತಾ ಹೀಗೆಂದರು.
ಅವರು ದೇಶ ಮತ್ತು ಜನತೆಯನ್ನು ಯಾವುದೇ ಕಾರಣಕ್ಕೂ ನೋಯಿಸಬಾರರದು. ನಮ್ಮ ಸಮಾಜ ಹೇಗಿದೆ, ಇಲ್ಲಿನ ಮನೋಭಾವ ಎಂತಹುದು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಕಲಾವಿದರಿಗೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸ್ವಾತಂತ್ರ್ಯವಿದೆ. ಆದರೆ ಸಮಾಜದ ಇತರರಿಗೆ ನೋವಾಗದಂತೆ ಕೆಲವು ಮಿತಿಗಳನ್ನು ಅವರು ಹಾಕಿಕೊಂಡಿರಬೇಕು ಎಂದು ಭಾಗ್ವತ್ ಅಭಿಪ್ರಾಯಪಟ್ಟರು.
ಸಂಪೂರ್ಣ ಭದ್ರತೆ: ಕಾಂಗ್ರೆಸ್ ಕತಾರ್ ಪೌರತ್ವವನ್ನು ಕೈಯಲ್ಲಿ ಹಿಡಿದುಕೊಂಡು ಆಯ್ಕೆಯ ಯೋಚನೆಯಲ್ಲಿರುವ ಹುಸೇನ್ ಭಾರತಕ್ಕೆ ಮರಳುವುದಾದರೆ ಸೂಕ್ತ ಭದ್ರತೆ ಒದಗಿಸಲು ಸರಕಾರ ಸಿದ್ಧವಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ತಿಳಿಸಿದ್ದಾರೆ.
ಎಂ.ಎಫ್. ಹುಸೇನ್ ಭಾರತ ಪ್ರಜೆ. ಅವರು ವಾಪಸಾಗಲು ಬಯಸಿದಲ್ಲಿ ಸಂಪೂರ್ಣ ಭದ್ರತೆ ನೀಡುವುದು ಸರಕಾರ ಮತ್ತು ನಮ್ಮ ಜವಾಬ್ದಾರಿಯಾಗಿದೆ. ಇದು ಸರಕಾರದ ಕರ್ತವ್ಯವೂ ಹೌದು ಎಂದರು.
ಅವರು ಈ ದೇಶದ ಬದಲಿಗೆ ಮತ್ತೊಂದು ದೇಶದ ರಾಷ್ಟ್ರೀಯತೆಯನ್ನು ಸ್ವೀಕರಿಸುವ ಯೋಚನೆ ಮಾಡುತ್ತಾರೆ ಎನ್ನುವ ವಿಚಾರವೇ ಭಾರತೀಯನಾಗಿ ನನಗೆ ತೀವ್ರ ನೋವು ತರುವ ವಿಚಾರ. ಆದರೆ ಹುಸೇನ್ ಅವರಿಗಾಗಿರುವ ತೊಂದರೆಗೆ ಕಾಂಗ್ರೆಸ್ ಅಥವಾ ಯುಪಿಎ ಸರಕಾರ ಹೊಣೆಯಲ್ಲ. ಅವರ ವಿರುದ್ಧ ಆರೆಸ್ಸೆಸ್ ಮತ್ತು ಅದಕ್ಕೆ ಸಂಬಂಧಪಟ್ಟ ಸಂಘಟನೆಗಳು ದೇಶದಾದ್ಯಂತ ಪ್ರಕರಣಗಳನ್ನು ದಾಖಲಿಸಿವೆ ಎಂದು ತಿವಾರಿ ತಿಳಿಸಿದ್ದಾರೆ.
ಬಿಜೆಪಿ ಎಚ್ಚರಿಕೆ ಪ್ರತಿಕ್ರಿಯೆ... ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖ್ಯಸ್ಥೆ ನಜ್ಮಾ ಹೆಫ್ತುಲ್ಲಾ, ಹುಸೇನ್ ಅತ್ಯುತ್ತಮ ಕಲಾವಿದ; ಆದರೆ ಧಾರ್ಮಿಕ ಭಾವನೆಗಳನ್ನು ನೋಯಿಸಲು ಯಾರಿಗೂ ಅಧಿಕಾರವಿಲ್ಲ. ಇಲ್ಲಿ ಹಿಂದೂ-ಮುಸ್ಲಿಂ ಎಂಬ ಪ್ರಶ್ನೆ ಬರುವುದಿಲ್ಲ. ಆದರೂ ಅವರಿಗೆ ಭಾರತದಲ್ಲಿ ಯಾವುದೇ ಬೆದರಿಕೆಗಳಿಲ್ಲ. ಅವರ ಕೆಲವು ಕಲಾಕೃತಿಗಳ ವಿರುದ್ಧ ಜನ ಪ್ರತಿಭಟನೆ ನಡೆಸುತ್ತಿದ್ದಾರೆ ಅಷ್ಟೇ, ಎಂದು ತಿಳಿಸಿದ್ದಾರೆ.