ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಜೆಟ್‌ಗೆ ಕಾಂಗ್ರೆಸ್ ಸ್ವಾಗತ; ಪ್ರತಿಪಕ್ಷಗಳ ಸಭಾತ್ಯಾಗಕ್ಕೆ ಟೀಕೆ (Congress | Union Budget 2010-11 | opposition walkout | Pranab Mukherjee)
Bookmark and Share Feedback Print
 
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಶ್ಲಾಘಿಸಿದ್ದು, ದೇಶೀಯ ಉತ್ಪಾದನೆ ದರ ಹೆಚ್ಚಿಸಲು ಇದು ಸಹಕರಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಬಜೆಟ್ ಮಂಡಿಸುತ್ತಿರುವಾಗ ಪ್ರತಿಪಕ್ಷಗಳ ಸಭಾತ್ಯಾಗ ನಡೆಸಿದ್ದನ್ನು ಕೂಡ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಪ್ರಧಾನಿ ಸಿಂಗ್ ಶ್ಲಾಘನೆ...
ಮುಖರ್ಜಿಯವರು ಮಂಡಿಸಿರುವ ಬಜೆಟ್ ಅತ್ಯುತ್ತಮವಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ಸಿಂಗ್, ಭಾರತವು ಶೇ.9ರ ಪ್ರಗತಿ ದರಕ್ಕೆ ಮರಳಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

ಬಜೆಟ್‌ನಿಂದ ಹೊರ ಹೊಮ್ಮುವ ಸಮಗ್ರ ಚಿತ್ರಣದತ್ತ ನೀವು ನೋಡಬೇಕು. ಜಗತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಈ ರೀತಿಯ ಹೊಂದಾಣಿಕೆಯುಳ್ಳ ಮುಂಗಡ ಪತ್ರವನ್ನು ಮಂಡಿಸಿರುವ ಸಚಿವರು ಅಭಿನಂದನಾರ್ಹರು ಎಂದು ಪ್ರಧಾನಿ ತಿಳಿಸಿದ್ದಾರೆ.

ಪ್ರತಿಪಕ್ಷಗಳ ನಡೆ ಸರಿಯಲ್ಲ: ಕಾಂಗ್ರೆಸ
ಮುಖರ್ಜಿಯವರು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಂತಹ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಶ್ಲಾಘಿಸಿದ್ದು, ವಿರೋಧ ಪಕ್ಷಗಳು ಬಜೆಟ್ ಮಂಡಿಸುತ್ತಿರುವಾಗಲೇ ಹೊರ ನಡೆದಿರುವುದನ್ನು ಖಂಡಿಸಿದೆ.

ಸಂಸತ್ತಿನ ಸಂಪ್ರದಾಯ ಮತ್ತು ಶಿಷ್ಟಾಚಾರ ಉಲ್ಲಂಘನೆ ಮತ್ತು ಸಂವಿಧಾನಕ್ಕೆ ಕಳಂಕ ತರುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಿವೆ ಎಂದು ಪಕ್ಷದ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ಪ್ರತಿಪಕ್ಷಗಳದ್ದು ವಿಷಾದಕರ ನಡವಳಿಕೆ: ಖುರ್ಷೀದ
ಬಜೆಟ್ ಮಂಡನೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷಗಳು ಹೊರ ನಡೆದಿರುವುದು ನಿಜಕ್ಕೂ ರಾಜಕೀಯ ದಿವಾಳಿತನ ಎಂದಿರುವ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್, ಈ ನಡೆ ತೀವ್ರ ವಿಷಾದಕರ ಎಂದು ಹೇಳಿದ್ದಾರೆ.

ನಿಮಗೆ ಬಜೆಟ್ ಹಿಡಿಸದಿದ್ದರೆ ಅಸಮಾಧಾನ ಸೂಚಿಸಬಹುದು. ಇದನ್ನು ಚರ್ಚೆಸಬಹುದು. ಆದರೆ ಹೊರ ನಡೆಯುವುದು ಸರಿಯಲ್ಲ. ಭಾರತೀಯ ಸಂಸದೀಯ ಪ್ರಜಾಪ್ರಭುತ್ವಕ್ಕೆ ಇದು ತೀವ್ರ ದುಃಖಕರವಾದ ಸುದ್ದಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರುಣಾನಿಧಿ ಸ್ವಾಗತ...
ಪ್ರಣಬ್ ಮುಖರ್ಜಿಯವರು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡುವ ಬಜೆಟ್ ನೀಡಿದ್ದಾರೆ. ಶಿಕ್ಷಣ, ಜನತೆಯ ಕಲ್ಯಾಣ ಮತ್ತು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿರುವುದು ಕೂಡ ಅಭಿನಂದನಾರ್ಹ ಬೆಳವಣಿಗೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪ್ರತಿಕ್ರಿಯಿಸಿದ್ದಾರೆ.

ಆದಾಯ ತೆರಿಗೆ ಶ್ರೇಣಿಯನ್ನು ಏರಿಸಿರುವುದನ್ನೂ ಶ್ಲಾಘಿಸಿರುವ ಕರುಣಾನಿಧಿ, ಇದು ಮಧ್ಯಮ ವರ್ಗದ ಜನರಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ