ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಲೆಯಲ್ಲಿ ಇಂಗ್ಲೀಷ್ ಆಡದ ಬಾಲಕಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ! (Muniswamy Yamini | T Seema | English teacher | Telugu)
Bookmark and Share Feedback Print
 
ಆಂಗ್ಲ ಮಾಧ್ಯಮ ಶಾಲೆಯೊಂದು ಇಂಗ್ಲೀಷ್ ಕಲಿಸುವ ಪರಿಯಿದು. ತರಗತಿಯಲ್ಲಿ ಇಂಗ್ಲೀಷ್ ಮಾತನಾಡಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡ ಪುಣ್ಯಾತಗಿತ್ತಿ ಶಿಕ್ಷಕಿಯೋರ್ವಳು ಮೂರನೇ ತರಗತಿಯ ಬಾಲಕಿಯೊಬ್ಬಳ ಬಟ್ಟೆ ಬಿಚ್ಚಿಸಿ ಭಾರೀ ಆಕ್ರೋಶಕ್ಕೆ ಈಡಾಗಿದ್ದಾಳೆ.

ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ವಿಜಯವಾಡದಲ್ಲಿನ ಅಜಿತ್ ಸಿಂಗ್ ನಗರದ ಸೈಂಟ್ ಅನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ. 10ರ ಹರೆಯದ ಹುಡುಗಿ ಶಾಲೆಗೆ ಹೋಗಲು ನಿರಾಕರಿಸುತ್ತಿರುವುದರ ಹಿಂದಿನ ಮರ್ಮವೇನು ಎಂದು ಹೆತ್ತವರು ಚಿಂತೆಯಲ್ಲಿದ್ದಾಗ ಶಿಕ್ಷಕಿಯ ಅವತಾರವನ್ನು ಮಗು ಬಾಯ್ಬಿಟ್ಟಿತ್ತು.

ಕ್ಲಾಸ್ ಲೀಡರ್ ಚಾಡಿ ಹೇಳಿದ್ದಳು...
ಈ ಶಾಲೆಯ ಇಂಗ್ಲೀಷ್ ಟೀಚರ್ ಟಿ. ಸೀಮಾ ಎಂಬಾಕೆ ಮೂರನೇ ತರಗತಿಯ ಕ್ಲಾಸ್ ಲೀಡರ್‌ಳನ್ನು ಕರೆದು, ತರಗತಿ ಮತ್ತು ಶಾಲೆಯ ಆವರಣದಲ್ಲಿ ಯಾರೆಲ್ಲ ಇಂಗ್ಲೀಷ್ ಬಿಟ್ಟು ತೆಲುಗು ಭಾಷೆಯನ್ನು ಮಾತನಾಡುತ್ತಾರೆ ಎಂಬುದನ್ನು ವರದಿ ಮಾಡಬೇಕೆಂದು ಕಟ್ಟಪ್ಪಣೆ ವಿಧಿಸಿದ್ದಳು.
WD

ಕ್ಲಾಸ್ ಲೀಡರ್ ಟೀಚರ್ ಹೇಳಿದಂತೆ ತನ್ನ ಸಹಪಾಠಿಗಳ ಚಟುವಟಿಕೆಗಳನ್ನು ಚಾಚೂ ತಪ್ಪದಂತೆ ಇಂಗ್ಲೀಷ್ ಶಿಕ್ಷಕಿಗೆ ಹೇಳುತ್ತಿದ್ದಳು. ಈ ಸಂದರ್ಭದಲ್ಲಿ 10ರ ಹರೆಯದ ಬಾಲಕಿ ಮುನಿಸ್ವಾಮಿ ಯಾಮಿನಿ ಎಂಬಾಕೆ ತೆಲುಗು ಮಾತನಾಡಿದ್ದನ್ನು ಕೂಡ ಶಿಕ್ಷಕಿಯ ಕಿವಿಗೆ ಹಾಕಲಾಗಿತ್ತು.

ಆಕ್ರೋಶಗೊಂಡ ಟೀಚರ್ ತರಗತಿಗೆ ಆಗಮಿಸಿ ಯಾಮಿನಿಯನ್ನು ಬೆಂಚ್ ಮೇಲೆ ನಿಲ್ಲಿಸಿದಳು. ಅಷ್ಟಕ್ಕೆ ಸುಮ್ಮನಾಗದ ಶಿಕ್ಷಕಿ ಸೀಮಾ, ಬಾಲಕಿಯಲ್ಲಿ ಬಟ್ಟೆ ಬಿಚ್ಚುವಂತೆ ಆದೇಶ ನೀಡಿದಳು.

ತೀವ್ರ ದಿಗಿಲುಗೊಂಡಿದ್ದ ಪುಟ್ಟ ಬಾಲಕಿ ಶಿಕ್ಷಕಿಯ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದಳು-- ಅದೂ ಹುಡುಗರೂ ಸೇರಿದಂತೆ 57 ಸಹಪಾಠಿಗಳ ಸಮ್ಮುಖದಲ್ಲಿ.

ಶಿಕ್ಷಕಿ ಬೆಂಬಲಕ್ಕೆ ನಿಂತ ಶಾಲೆ...
ಇಷ್ಟಾದರೂ ಮಗು ಈ ವಿಚಾರವನ್ನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ಮರುದಿನ ಎಂದಿನಂತೆ ಬಾಲಕಿಯನ್ನು ಶಾಲೆಗೆ ಹೊರಡಿಸಲು ಸಿದ್ಧತೆ ನಡೆಸಿದಾಗ ಅನಿವಾರ್ಯವಾಗಿ ಹೆತ್ತವರಲ್ಲಿ ಹೇಳಿದ್ದಳು.

ತೀವ್ರ ಅಸಮಾಧಾನಗೊಂಡ ಯಾಮಿನಿಯ ತಂದೆ ಜೋಸೆಫ್ ಶಾಲೆಗೆ ತೆರಳಿದಾಗ ಅಲ್ಲಿ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ಇತರ ಶಿಕ್ಷಕರು ಶಿಕ್ಷಕಿ ಸೀಮಾ ವರ್ತನೆಯನ್ನು ಖಂಡಿಸಿ, ವಿಷಾದ ವ್ಯಕ್ತಪಡಿಸುವ ಬದಲು ಆಕೆಯ ರಕ್ಷಣೆಗೆ ನಿಂತು ಜೋಸೆಫ್‌ರಿಗೆ ಮುಖಭಂಗವನ್ನುಂಟು ಮಾಡಿದರು.

ಸ್ವಲ್ಪ ಹೊತ್ತಿನಲ್ಲೇ ಈ ಸುದ್ದಿ ಮಾಧ್ಯಮ ಮಿತ್ರರ ಕಿವಿಗೂ ಬಿದ್ದಿತ್ತು. ಕೆಲವು ಸಂಘಟನೆಗಳು ಕೂಡ ಒಟ್ಟು ಸೇರಿ ಪ್ರತಿಭಟನೆ ನಡೆಸಲಾರಂಭಿಸಿದಾಗ ಆರಂಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಶಾಲೆಯ ಆಡಳಿತ ಯತ್ನಿಸಿತಾದರೂ, ಬಳಿಕ ಕ್ಷಮೆ ಯಾಚಿಸಿ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ರಾಜ್ಯ ಸರಕಾರವೂ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶಿಸಿದೆ. ಶಿಕ್ಷಕಿ ತಪ್ಪಿತಸ್ಥಳೆಂದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಂಧ್ರ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ