ಬಜೆಟ್ ಪ್ರಕಟವಾದ ತಕ್ಷಣ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರ ಕ್ರಮಗಳನ್ನು ಕಾಂಗ್ರೆಸ್ ಮೇಲಿಂದ ಮೇಲೆ ಸಮರ್ಥಿಸಿಕೊಂಡಿದೆಯಾದರೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸಿದ್ದು ಅಸಮಾಧಾನ ಹುಟ್ಟಿಸಿದೆ. ಆದರೆ ಪಕ್ಷದ ಅಸಮಾಧಾನ ಮತ್ತು ವಿರೋಧಪಕ್ಷಗಳ ಪ್ರತಿಭಟನೆ ಬೆದರಿಕೆಗಳ ಹೊರತಾಗಿಯೂ ಮುಖರ್ಜಿಯವರು ನಿರ್ಧಾರ ಬದಲಾಯಿಸಲು ನಿರಾಕರಿಸಿದ್ದಾರೆ.
ನಿನ್ನೆ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಬೆಲೆ ಏರಿಕೆ ದೇಶದಾದ್ಯಂತ ಜಾರಿಗೆ ಬಂದಿದೆ. ಮುಂಬೈಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ಮೂರು ರೂಪಾಯಿ, ಮುಂಬೈಯಲ್ಲಿ 2.71 ರೂಪಾಯಿ ಹೆಚ್ಚಳಗೊಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 2.97 ಹಾಗೂ ಡೀಸೆಲ್ ಬೆಲೆ 2.81 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ.
ಬಜೆಟ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸಿದ್ದನ್ನು ಪ್ರತಿಭಟಿಸಿ ಬಜೆಟ್ ಮಂಡಿಸುತ್ತಿರುವಾಗಲೇ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಮೊತ್ತ ಮೊದಲ ಬಾರಿಗೆ ಲೋಕಸಭೆಯಿಂದ ಹೊರಗೆ ನಡೆದಿದ್ದವು. ಪೆಟ್ರೋಲ್ ದರವನ್ನು ಹಿಂದಿನಂತೆ ಕಾಪಾಡಿಕೊಳ್ಳದ ಹೊರತು ಸಂಸತ್ ಕಲಾಪಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಬೆದರಿಕೆಯನ್ನೂ ಪ್ರತಿಪಕ್ಷಗಳು ಹಾಕಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಣಬ್ ಮುಖರ್ಜಿ, ಯಾವುದೇ ಕಾರಣಕ್ಕೂ ಸುಂಕ ಹೆಚ್ಚಳವನ್ನು ವಾಪಸ್ ಪಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 'ಹೆಜ್ಜೆ ಹಿಂದಕ್ಕಿಡುವ ಪ್ರಶ್ನೆ ಎಲ್ಲಿದೆ? ಹಾಗೆ ಹಿಂದಕ್ಕೆ ಸರಿಯುವುದಿದ್ದರೆ ನಾನು ಸುಂಕ ಹೆಚ್ಚಳವನ್ನೇ ಮಾಡುತ್ತಿರಲಿಲ್ಲ. ಇದೇನೂ ದೊಡ್ಡದಾದ ಹೊಡೆತವಲ್ಲ. ಈ ಹಿಂದೆಯೇ ಆಗಬೇಕಿತ್ತು' ಎಂದಿದ್ದಾರೆ.
ಬೆಲೆಯೇರಿಕೆಯಿಂದ ದೇಶ ತತ್ತರಿಸುತ್ತಿದ್ದು, ಈ ಕುರಿತ ಟೀಕೆಗಳಲ್ಲೇ ಕಾಂಗ್ರೆಸ್ ತೋಯ್ದು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆಯನ್ನು ಹೆಚ್ಚಳಗೊಳಿಸುವ ಮುಖರ್ಜಿಯವರ ನಿರ್ಧಾರ ಸರಿಯಲ್ಲ ಎಂಬುದು ಕಾಂಗ್ರೆಸ್‌ನ ಅಭಿಪ್ರಾಯವಾಗಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಮುಖಂಡರು ಮುಖರ್ಜಿಯವರ ಬಜೆಟನ್ನು ಮೇಲಿಂದ ಮೇಲೆ ಸ್ವಾಗತಿಸಿದ್ದರೂ ಟೀಕೆಗಳನ್ನು ಎದುರಿಸಲಾಗದೆ ಒಳಗಿಂದೊಳಗೆ ಅಸಮಾಧಾನಗೊಂಡಿದ್ದಾರೆ. ಇದನ್ನು ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿಯವರಿಗೆ ತಲುಪಿಸಲಾಗಿದೆ ಎಂದು ಹೇಳಲಾಗಿದೆ.
ಬಜೆಟ್ ನಂತರ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವಮುರಳಿ ದಿಯೋರಾ ಪುತ್ರ ಹಾಗೂ ಕಾಂಗ್ರೆಸ್ ಯುವ ಸಂಸದ ಮಿಲಿಂದ್ ದಿಯೋರಾ, ಪೆಟ್ರೋಲ್ ಬೆಲೆಯನ್ನು ಏರಿಸಲಾಗಿರುವ ಸಮಯ ಸರಿಯಾಗಿಲ್ಲ. ಈ ಸಂದರ್ಭದಲ್ಲಿ ಹೆಚ್ಚಳ ಮಾಡಬಾರದಿತ್ತು ಎಂದಿದ್ದಾರೆ.