ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಗನಸಖಿ, ನಟಿ, ವಿದ್ಯಾರ್ಥಿನಿಯೊಂದಿಗೆ 'ಸ್ವಾಮೀಜಿ' ಕಾಮಕಾಂಡ!
(Godman | sex racket | Shiv Murat Dwivedi | prostitution business)
ದೇವರ ಹೆಸರಿನಲ್ಲಿ ಗಗನಸಖಿಯರು, ನಟಿಯರು ಮತ್ತು ಎಂಬಿಎ ವಿದ್ಯಾರ್ಥಿನಿಯರನ್ನಿಟ್ಟುಕೊಂಡು ಹೈಕ್ಲಾಸ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ವಯಂಘೋಷಿತ ದೇವಮಾನವನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸ್ವಯಂಘೋಷಿತ 'ಸ್ವಾಮೀಜಿ'ಯನ್ನು ಶಿವ ಮುರುತ್ ದ್ವಿವೇದಿ (39) ಆಲಿಯಾಸ್ 'ಇಚ್ಚಾಧರಿ ಸಂತ್ ಸ್ವಾಮಿ ಭೀಮಾನಂದ್ ಜೀ ಮಹಾರಾಜ್' ಎಂದು ಗುರುತಿಸಲಾಗಿದೆ. ಹಲವಾರು ವರ್ಷಗಳಿಂದ ಈತ ಸ್ವಾಮೀಜಿಯ ವೇಷದಲ್ಲಿ ಜನರನ್ನು ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ದಕ್ಷಿಣ ದೆಹಲಿಯ ಕಾನ್ಪುರ ಪ್ರದೇಶದಲ್ಲಿ ಒಂದು ದೇವಸ್ಥಾನವನ್ನೂ ಕಟ್ಟಿಕೊಂಡಿರುವ ಈತನನ್ನು ಅಲ್ಲಿಂದಲೇ ಬಂಧಿಸಲಾಗಿದೆ. ಆತನ ಜತೆಗಿದ್ದ ಇಬ್ಬರು ಗಗನಸಖಿಯರು, ಓರ್ವ ಬಾಲಿವುಡ್ ಆಕಾಂಕ್ಷಾ ನಟಿ ಮತ್ತು ಪ್ರಖ್ಯಾತ ಕಾಲೇಜೊಂದರ ಎಂಬಿಎ ವಿದ್ಯಾರ್ಥಿನಿ ಹಾಗೂ ಪಿಂಪ್ ಓರ್ವನನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತ ಯುವತಿಯರು 22ರಿಂದ 25 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸ್ವಯಂಘೋಷಿತ 'ದೇವಮಾನವ' ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಹುಡುಗಿಯನ್ನು ಪೂರೈಸುತ್ತಿದ್ದ. ಆತನ ಗ್ರಾಹಕರು ದೆಹಲಿಗೆ ಬಂದು ಇಲ್ಲಿನ ಪಂಚತಾರಾ ಹೊಟೇಲುಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಕಳೆದ ಹತ್ತು ವರ್ಷಗಳಿಂದ ಈ ದಂಧೆಯನ್ನು ವ್ಯವಸ್ಥಿತವಾಗಿ ಆತ ನಡೆಸಿಕೊಂಡು ಬರುತ್ತಿದ್ದಾನೆ. ಆತನ ದೇವಸ್ಥಾನದಲ್ಲಿದ್ದ ಸಿಸಿಟಿವಿಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಈತ ಮೂಲತಃ ಉತ್ತರ ಪ್ರದೇಶದ ಚಿತ್ರಕೂಟದವನು. 1988ರಲ್ಲಿ ದೆಹಲಿಗೆ ಬಂದಿದ್ದ. ಆರಂಭದಲ್ಲಿ ನೆಹರು ಪ್ಯಾಲೇಸ್ನಲ್ಲಿ 'ಪಾರ್ಕ್ ರಾಯಲ್'ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ. ಬಳಿಕ ಲಾಜಪತ್ ನಗರದಲ್ಲಿನ ಮಸಾಜ್ ಪಾರ್ಲರ್ ಸೇರಿಕೊಂಡಿದ್ದ. 1997ರಲ್ಲಿ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಒಮ್ಮೆ ಜೈಲು ಸೇರಿದ್ದ. 1998ರಲ್ಲಿ ಕಳ್ಳತನ ಮಾಡಿದ ಸೊತ್ತುಗಳನ್ನು ಸ್ವೀಕರಿಸಿದ ಆರೋಪ ಮೇಲೆ ಮತ್ತೊಮ್ಮೆ ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆರೆ ಸಿಕ್ಕಿರುವ ಇಬ್ಬರು ಗಗನಸಖಿಯರಲ್ಲಿ ಒಬ್ಬಳು ಭಾರತದ ಮೂಂಚೂಣಿಯಲ್ಲಿನ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡಿದ್ದವಳು. ಮತ್ತೊಬ್ಬಳು ಯೂರೋಪ್ ಏರ್ವೇಸ್ನಲ್ಲಿ ಕೆಲಸ ಮಾಡಿದವಳು. ಇಬ್ಬರೂ ದಕ್ಷಿಣ ದೆಹಲಿಯ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಮತ್ತೋರ್ವ ಯುವತಿ ಬಾಲಿವುಡ್ನಲ್ಲಿ ನಟಿಯಾಗಬೇಕೆಂಬ ಆಕಾಂಕ್ಷೆ ಹೊತ್ತಿದ್ದವಳು ಎಂದು ಹೇಳಲಾಗಿದೆ.
ತಾನು ಸಾಯಿಬಾಬಾ ಅವರ ಅನುಯಾಯಿ ಎಂದು ಹೇಳಿಕೊಳ್ಳುತ್ತಾ ಜನರನ್ನು ಮೋಸಗೊಳಿಸುತ್ತಿದ್ದ ಈತ ಬಾದರ್ಪುರದಲ್ಲಿ ಸಾಯಿಬಾಬಾ ಅವರ ಮಂದಿರವೊಂದನ್ನೂ ಕಟ್ಟಿಸಿದ್ದಾನೆ. ಕಾನ್ಪುರದಲ್ಲಿಯೂ ದೇವಸ್ಥಾನವೊಂದನ್ನು ಕಟ್ಟಿಸಿರುವ ಈತ ಅಲ್ಲಿ ಪ್ರವಚನ ಹಾಗೂ ಸತ್ಸಂಗಗಳನ್ನು ನಡೆಸುತ್ತಾ ಬಂದಿದ್ದಾನೆ. ಪತ್ರಿಕೆಗಳಲ್ಲಿ ಧಾರ್ಮಿಕ ಪ್ರವಚನಗಳ ಕುರಿತು ಲೇಖನಗಳನ್ನೂ ಬರೆದಿದ್ದಾನೆ. ಅಲ್ಲದೆ ಧಾರ್ಮಿಕ ಬೋಧನೆಯುಳ್ಳ ಸಿಡಿಯೊಂದನ್ನೂ ಆತ ಬಿಡುಗಡೆ ಮಾಡಿದ್ದಾನೆ ಎಂದು ಈತನ ಕಾಮಕಾಂಡದ ಹಿಂದಿನ ಕರ್ಮಗಳನ್ನು ಪೊಲೀಸರು ಬಯಲಿಗೆಳೆದಿದ್ದಾರೆ.