ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖರ್ಜಿ ಬಜೆಟ್; ರಾಷ್ಟ್ರಪತಿ ಪ್ರತಿಭಾ ಪಾಟೀಲ್ ವೇತನಕ್ಕೆ ಕತ್ತರಿ (Salary cut for President | Pranab Mukherjee | Pratibha Patil | Rashtrapati Bhavan)
Bookmark and Share Feedback Print
 
ರಾಷ್ಟ್ರದ ಪ್ರಥಮ ಪ್ರಜೆ ಪ್ರತಿಭಾ ಸಿಂಗ್ ಪಾಟೀಲ್ ಅವರ ವೇತನಕ್ಕೂ ವಿತ್ತ ಸಚಿವ ಪ್ರಣಬ್ ಮುಖರ್ಜಿ ಕತ್ತರಿ ಹಾಕಿದ್ದಾರೆ. ಕಳೆದ ವರ್ಷ ನೀಡಿದ್ದ ಅರ್ಧದಷ್ಟು ಮಾತ್ರ ವೇತನ ಮತ್ತು ಇತರ ಭತ್ಯೆಗಳನ್ನು ಮುಂದಿನ ಆರ್ಥಿಕ ವರ್ಷದಲ್ಲಿ ರಾಷ್ಟ್ರಪತಿಗಳು ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಕಳೆದ ಬಾರಿ (2009-10) ರಾಷ್ಟ್ರಪತಿಯವರ ವೇತನ ಮತ್ತು ಭತ್ಯೆಗಳಿಗಾಗಿ ಬಜೆಟ್‌ನಲ್ಲಿ 38 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ ಈ ಬಾರಿ (2010-11) ಅದನ್ನು 18 ಲಕ್ಷ ರೂಪಾಯಿಗಳಿಗೆ ಒಮ್ಮೆಲೆ ಇಳಿಕೆಗೊಳಿಸಲಾಗಿದೆ.

ಅಂದರೆ ರಾಷ್ಟ್ರಪತಿಯವರು ಪ್ರತೀ ತಿಂಗಳು ತಲಾ 1.5 ಲಕ್ಷ ರೂಪಾಯಿ ವೇತನ ಮತ್ತು ಇತರ ಭತ್ಯೆಗಳನ್ನು ಪಡೆದುಕೊಳ್ಳಲಿದ್ದಾರೆ. ಸಂವಿಧಾನವು ರಾಷ್ಟ್ರಪತಿಯವರ ವೇತನವನ್ನು ಹತ್ತು ಸಾವಿರವೆಂದು ನಿಗದಿ ಮಾಡಿದ್ದನ್ನು 1998ರಲ್ಲಿ 50,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿತ್ತು.

2008ರ ಸೆಪ್ಟೆಂಬರ್ ತಿಂಗಳವರೆಗೂ ರಾಷ್ಟ್ರಾಧ್ಯಕ್ಷರು ತಿಂಗಳಿಗೆ ಕೇವಲ 50,000 ರೂಪಾಯಿ ಸಂಬಳವನ್ನಷ್ಟೇ ಪಡೆಯುತ್ತಿದ್ದರು. ಆದರೆ ಸರಕಾರವು ಅವರ ಸಂಬಳವನ್ನು 1.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿತ್ತು.

ಆದರೆ 2009-10ರ ಸಾಲಿನ ಬಜೆಟ್‌ನಲ್ಲಿ ರಾಷ್ಟ್ರಪತಿಯವರ ವೇತನವನ್ನು ದ್ವಿಗುಣಗೊಳಿಸಲಾಗಿತ್ತು. ಈ ಬಾರಿ ಮತ್ತೆ ಹಿಂದಿನ ಸ್ಥಿತಿಯನ್ನೇ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ.

ಅದೇ ಹೊತ್ತಿಗೆ ರಾಷ್ಟ್ರಪತಿ ಭವನಕ್ಕೆ ನೀಡುವ ಅನುದಾನವನ್ನು 2010-11ರ ಸಾಲಿನಲ್ಲಿ ಶೇ.9.93ರಷ್ಟು ಹೆಚ್ಚಳ ಮಾಡಲಾಗಿದೆ. ಕಳೆದ ಬಾರಿ 27.52 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದರೆ, ಈ ಬಾರಿ 29.11 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ರಾಷ್ಟ್ರಪತಿ ಭವನದ ಖರ್ಚುಗಳು, ಎಲ್ಲಾ ಸಿಬ್ಬಂದಿಗಳ ವೇತನ, ಕಚೇರಿಯ ವೆಚ್ಚಗಳು, ಹೊಸ ವಾಹನಗಳ ಖರೀದಿ ಮುಂತಾದ ಎಲ್ಲಾ ಖರ್ಚುಗಳಿಗೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ