ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ರನ್‌ವೇಯಲ್ಲಿ ದಿಗಂಬರ; ತಡವಾಗಿ ಇಳಿದ ವಿಮಾನ..! (Naked man | Delhi runway | Indira Gandhi International Airport | Arun Rai)
Bookmark and Share Feedback Print
 
ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಶುಕ್ರವಾರ ರಾತ್ರಿ ಬೆತ್ತಲೆ ವ್ಯಕ್ತಿಯೊಬ್ಬ ಪಾನಮತ್ತನಾಗಿ ಬಿದ್ದುಕೊಂಡಿದ್ದ ಪರಿಣಾಮ ವಿಮಾನವೊಂದು ಸುಮಾರು 20 ನಿಮಿಷಗಳಷ್ಟು ಹೊತ್ತು ಆಕಾಶದಲ್ಲೇ ಉಳಿಯಬೇಕಾದ ವಿಚಿತ್ರ ಪ್ರಸಂಗವೊಂದು ನಡೆದಿದೆ.

33ರ ಹರೆಯದ ಬಿಹಾರ ಮೂಲದ ಅರುಣ್ ರೈ ಎಂಬ ಯುವಕ ಕಂಠಪೂರ್ತಿ ಕುಡಿದು ವಿಮಾನ ನಿಲ್ದಾಣದ ಆವರಣ ಗೋಡೆ ಹಾರಿ ಒಳಗೆ ಬಂದಿದ್ದ. ಬಳಿಕ ರನ್‌ವೇ ಪಕ್ಕದ ಟ್ಯಾಕ್ಸಿ ಮಾರ್ಗದಲ್ಲಿ ಆತ ಬಿದ್ದಿದ್ದ ಎಂದು ವರದಿಗಳು ಹೇಳಿವೆ.

ಈ ಸಂದರ್ಭದಲ್ಲಿ ಆತನ ಮೈಮೇಲೆ ಬಟ್ಟೆಯೇ ಇರಲಿಲ್ಲ. ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದಾಗಿ ಭಾರೀ ಅಪಾಯ ತಪ್ಪಿ ಹೋಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.

ಶುಕ್ರವಾರ ರಾತ್ರಿ 7.55ರ ಹೊತ್ತಿಗೆ ರನ್‌ವೇಯಲ್ಲಿ ಯಾವುದೋ ವಸ್ತುವನ್ನು ಕಂಡ ವಾಯು ನಿಯಂತ್ರಣ ಕೇಂದ್ರದ (ಎಟಿಸಿ) ನಿಯಂತ್ರಕ ಅದನ್ನು ಬರಿಗಣ್ಣಲ್ಲಿ ಗುರುತಿಸಲಾಗದೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದ. ತಕ್ಷಣವೇ ಈ ರನ್‌ವೇಯಲ್ಲಿ ಇಳಿಯಬೇಕಿದ್ದ ಕಿಂಗ್‌ಫಿಶರ್ ವಿಮಾನಕ್ಕೆ ಪೂರ್ವ ಮಾಹಿತಿ ನೀಡಲಾಯಿತು.

ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬ ವಸ್ತ್ರರಹಿತನಾಗಿ ರನ್‌ವೇ ಪಕ್ಕದಲ್ಲಿ ಬಿದ್ದಿರುವುದು ಕಂಡು ಬಂತು. ಆತನನ್ನು ವಶಕ್ಕೆ ತೆಗೆದುಕೊಂಡ ಬಳಿಕ ವಿಮಾನವನ್ನು ರನ್‌ವೇಯಲ್ಲಿ ಇಳಿಯಲು ಅವಕಾಶ ನೀಡಲಾಯಿತು. 8 ಗಂಟೆಗೆ ಇಳಿಯಬೇಕಿದ್ದ ವಿಮಾನ 8.21ಕ್ಕೆ ಇಳಿಯಿತು. ಅಷ್ಟು ಹೊತ್ತಿನವರೆಗೆ ವಿಮಾನವನ್ನು ಆಕಾಶದಲ್ಲೇ ಸುತ್ತು ಹಾಕಲು ಸೂಚನೆ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಿಮಾನ ನಿಲ್ದಾಣ ರನ್‌ವೇಗಳಲ್ಲಿ ಪ್ರಾಣಿಗಳು ಅಡ್ಡಾಡುವುದು ಸಾಮಾನ್ಯ. ಆದರೆ ವ್ಯಕ್ತಿಯೊಬ್ಬ ಹೀಗೆ ಬೆತ್ತಲೆಯಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು. ಎಟಿಸಿ ಅಧಿಕಾರಿಗಳು ಇದನ್ನು ಗುರುತಿಸಲು ವಿಫಲರಾಗುತ್ತಿದ್ದರೆ ಅಪಾಯ ಸಂಭವಿಸುತ್ತಿತ್ತು ಎಂದು ಕಿಂಗ್‌ಫಿಶರ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.

ಭದ್ರತಾ ಪಡೆಗಳು ಅರುಣ್ ರೈಯನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿವೆ. ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಹಸ್ತಾಂತರಿಸಲಾಗಿದೆ. ಶನಿವಾರ ದೆಹಲಿ ಪೊಲೀಸರು ಪ್ರಶ್ನಿಸುವ ಸಾಧ್ಯತೆಗಳಿವೆ. ಈಗ ಆತ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ