ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರನ್ನಿಟ್ಟಿರುವ ಜೈಲುಗಳಿಗೆ ಮೊಬೈಲ್ ಫೋನ್ ಜಾಮರ್
(Jail | Maoist | Mobile phone | mobile phone jammers | Prison)
ಮಾವೋವಾದಿಗಳನ್ನು ಇಡಲಾಗಿರುವ ಜೈಲುಗಳಿಗೆ ಮೊಬೈಲುಗಳನ್ನು ಬಳಸಿ ವ್ಯವಸ್ಥಿತ ದಾಳಿ ನಡೆಸಲು ಅವರ ಸಹಚರರು ಹೊರಗಿನಿಂದ ಸಹಕಾರ ನೀಡಬಹುದು ಎಂಬ ಭೀತಿಯಿಂದ ಛತ್ತೀಸ್‌ಗಢದ ಏಳು ಜೈಲುಗಳಲ್ಲಿ ಮೊಬೈಲ್ ಫೋನ್ ಜಾಮರುಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ಜೈಲುಗಳಲ್ಲಿ 25 ಸೆಲ್ ಫೋನ್ ಜಾಮರುಗಳನ್ನು ಅಳವಡಿಸಲಾಗುತ್ತದೆ. ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಕೆಲವೇ ವಾರಗಳೊಳಗೆ ಸಾಧನಗಳು ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರಿಂದ ಇಲ್ಲಿಗೆ ಬರುವ ಮತ್ತು ಹೊರ ಹೋಗುವ ಕರೆಗಳನ್ನು ಸ್ಥಗಿತಗೊಳಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಜೈಲು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ಬಾಧಿತ ಪ್ರದೇಶಗಳಲ್ಲಿನ ರಾಯಪುರ, ಬಿಲಾಸ್ಪುರ್, ಜಗದಾಲ್ಪುರ, ಅಂಬಿಕಾಪುರದ ಜೈಲುಗಳು ಹಾಗೂ ಕಾಂಕೇರ್‌ನ ಜಿಲ್ಲಾ ಜೈಲು, ಕೋರ್ಬಾ ಮತ್ತು ದಾಂತೇವಾಡಾದ ಕಕ್ಗೋರಾಗಳಲ್ಲಿನ ಸಬ್‌ಜೈಲುಗಳಲ್ಲಿ ಈ ಮೊಬೈಲ್ ಜಾಮರ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.
2007ರ ಡಿಸೆಂಬರ್ ತಿಂಗಳಲ್ಲಿ ರಾಯ್ಪುರದಿಂದ 380 ಕಿಲೋ ಮೀಟರ್ ದೂರದಲ್ಲಿರುವ ದಾಂತೇವಾಡದ ಸಬ್‌ಜೈಲಿಗೆ ನುಗ್ಗಿದ್ದ ಮಾವೋವಾದಿಗಳು, ಮೊಬೈಲ್ ಬಳಸಿ ಜೈಲ್ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ 100 ನಕ್ಸಲರು ಸೇರಿದಂತೆ 300 ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈ ಘಟನೆ ಬಳಿಕ ಸರಕಾರವು ಮಾವೋವಾದಿ ಗೆರಿಲ್ಲಾಗಳು ಮತ್ತು ಕುಖ್ಯಾತ ಕ್ರಿಮಿನಲ್‌ಗಳನ್ನು ಇಡಲಾಗಿರುವ ಜೈಲುಗಳಿಗೆ ಮೊಬೈಲ್ ಫೋನ್ ಜಾಮರುಗಳನ್ನು ಅಳವಡಿಸುವ ನಿರ್ಧಾರಕ್ಕೆ ಬಂದಿತ್ತು.
ಅಲ್ಲದೆ ಈ ರೀತಿ ಜೈಲುಗಳಲ್ಲಿ ಮೊಬೈಲ್ ಜಾಮರುಗಳನ್ನು ಅಳವಡಿಸುವುದರಿಂದ ಜೈಲಿನಿಂದಲೇ ಹೊರಗಿನ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ಕುಖ್ಯಾತ ಕ್ರಿಮಿನಲ್‌ಗಳ ಕೃತ್ಯಕ್ಕೂ ಕಡಿವಾಣ ಹಾಕಿದಂತಾಗುತ್ತದೆ ಎನ್ನುವುದು ಜೈಲಧಿಕಾರಿಗಳ ಅಭಿಪ್ರಾಯ.