ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಇಳಿಸಬೇಕೆಂದು ಆಗ್ರಹಿಸುವ ವಿರೋಧಪಕ್ಷಗಳ ಬೇಡಿಕೆಗೆ ಯುಪಿಎಯಿಂದಲೂ ಮತಗಳು ಬೀಳುತ್ತಿವೆ. ಯುಪಿಎ ಪಾಲುದಾರ ಪಕ್ಷಗಳಾದ ತಮಿಳುನಾಡಿನ ಡಿಎಂಕೆ ಮತ್ತು ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್‌ಗಳು ಒತ್ತಾಯಿಸಿವೆ.
ನಿನ್ನೆ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ್ದ ಬಜೆಟನ್ನು ಆರಂಭದಲ್ಲಿ ಸ್ವಾಗತಿಸಿದ್ದ ಡಿಎಂಕೆ, ಇದೀಗ ಪೆಟ್ರೋಲಿಯಂ ಮೇಲೆ ಹೆಚ್ಚಿಸಲಾಗಿರುವ ಸುಂಕಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ. ಈ ನಡುವೆ ಪೆಟ್ರೋಲ್ ದರಯೇರಿಕೆಗೆ ಕಾಂಗ್ರೆಸ್ಸಿನ ಹಲವು ಮುಖಂಡರು ಕೂಡ ಒಳಗಿಂದೊಳಗೆ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳೂ ಬಂದಿವೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಗರಿಷ್ಠ ಹಣದುಬ್ಬರದ ಜತೆ ಹೋರಾಡುತ್ತಿರುವ ಹೊತ್ತಿನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವ ನಿರ್ಧಾರದಿಂದ ಆಹಾರ ವಸ್ತುಗಳ ಬೆಲೆಯು ಪ್ರವಾಹೋಪಾದಿಯ ಪರಿಣಾಮ ಬೀರಬಹುದು ಎಂದಿರುವ ಡಿಎಂಕೆ, ತಕ್ಷಣವೇ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದೆ.
ಈ ಸಂಬಂಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರಿಗೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪತ್ರ ಬರೆದಿದ್ದಾರೆ. ತಕ್ಷಣವೇ ಸಿಂಗ್ ಮತ್ತು ಸೋನಿಯಾ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಕನಿಷ್ಠ ಡೀಸೆಲ್ ಬೆಲೆಯನ್ನಾದರೂ ಕಡಿಮೆಗೊಳಿಸಬೇಕು. ಆ ಮೂಲಕ ರೈತರು ಮತ್ತು ಸಾಮಾನ್ಯ ಜನರ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.
ಬ್ಯಾನರ್ಜಿ ಅಸಮಾಧಾನ.... ಕಚ್ಚಾ ಪೆಟ್ರೋಲಿಯಂ ಆಮದಿನ ಮೇಲೆ ಸುಂಕ ಹೇರುವ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇಂದ್ರ ರೈಲ್ವೇ ಖಾತೆ ಸಚಿವೆ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತೀವ್ರವಾಗಿ ವಿರೋಧಿಸಿದ್ದಾರೆ.
ಕೇಂದ್ರದ ಈ ನಿರ್ಧಾರವು ನಮಗೆ ಸಮಾಧಾನ ತಂದಿಲ್ಲ. ಇದನ್ನು ಮರುಪರಿಶೀಲನೆ ನಡೆಸಬೇಕು. ಈ ವಿಚಾರದ ಕುರಿತು ನಮ್ಮ ಭಿನ್ನಾಭಿಪ್ರಾಯವನ್ನು ಲೋಕಸಭೆಯಲ್ಲಿ ಹೇಳಿಕೊಳ್ಳಲಿದ್ದೇವೆ ಎಂದು ಪಕ್ಷದ ಮುಖಂಡ ಸುದೀಪ್ ಬಂದೋಪಾಧ್ಯಾಯ ತಿಳಿಸಿದ್ದಾರೆ.
ಬಜೆಟ್ ಪ್ರಸ್ತಾವನೆ ಸಂಬಂಧ ವಿರೋಧ ಪಕ್ಷಗಳು ನಿಲುವಳಿ ಗೊತ್ತುವಳಿ ಮಂಡಿಸಲು ಮುಂದಾದರೆ ನೀವು ಅವರೊಂದಿಗೆ ಸೇರಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಅವರು, ನಾವು ಬಜೆಟ್‌ನಲ್ಲಿನ ಕೇವಲ ಒಂದು ಅಂಶವನ್ನು ಮಾತ್ರ ವಿರೋಧಿಸುತ್ತಿದ್ದೇವೆ. ಸಂಪೂರ್ಣ ಬಜೆಟನ್ನು ವಿರೋಧಿಸುತ್ತಿಲ್ಲ ಎಂದರು.