ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಡ್ಗಾಂವ್ ಸ್ಫೋಟ: ಸನಾತನ ಸಂಸ್ಥೆಯ ಲಿಂಕ್ ಕರ್ನಾಟಕದಲ್ಲಿ? (Margao blast | Karnataka | Jayprakash alias Anna | Sanatan Sanstha)
Bookmark and Share Feedback Print
 
ಕಳೆದ ವರ್ಷದ ಮಡ್ಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 'ಸನಾತನ ಸಂಸ್ಥೆ'ಗೆ ಸೇರಿದ ನಾಲ್ವರನ್ನು ಬಂಧಿಸಲಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಸೇರಿದ ಇನ್ನೂ ನಾಲ್ವರು ಪಾಲ್ಗೊಂಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳವು ನ್ಯಾಯಾಲಯಕ್ಕೆ ತಿಳಿಸಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಸಿರುವ ನಾಲ್ವರಲ್ಲಿ ಕರ್ನಾಟಕದ ಓರ್ವ ವ್ಯಕ್ತಿಯೂ ಸೇರಿದ್ದು, ಆತನನ್ನು ಮಂಗಳೂರಿನ ಜೈಪ್ರಕಾಶ್ ಆಲಿಯಾಸ್ ಅಣ್ಣಾ ಎಂದು ಗುರುತಿಸಲಾಗಿದೆ.

ರತ್ನಗಿರಿಯ ಪ್ರಶಾಂತ್ ಜುವೇಕರ್, ಪುಣೆಯ ಸಾರಂಗ್ ಕುಲಕರ್ಣಿ, ಮಂಗಳೂರಿನ ಜೈಪ್ರಕಾಶ್ ಮತ್ತು ಇನ್ನೂ ಗುರುತಿಸಲಾಗದ ವ್ಯಕ್ತಿ ಘಟನೆಯ ಹಿಂದಿದ್ದಾರೆ. ಈ ಆರೋಪಿಗಳನ್ನು ಬಂಧಿಸುವ ಯತ್ನ ಮುಂದುವರಿದಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.

ಈ ನಾಲ್ವರು ಶಂಕಿತರು ಸ್ಫೋಟಕಗಳನ್ನು ಪರೀಕ್ಷೆ ನಡೆಸುವ ಹೊತ್ತಿನಲ್ಲಿ ಹಾಜರಿದ್ದರು. ಮಾಡ್ಗಾಂವ್ ಸ್ಫೋಟ ನಡೆಯುವ ಎರಡು ತಿಂಗಳ ಮೊದಲು ಉತ್ತರ ಗೋವಾದ ತಲೌಲಿಮ್ ಗ್ರಾಮದ ಕಾಡಿನಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು.

ಈಗಾಗಲೇ ಬಂಧಿಸಿದವರನ್ನು ವಿನಯ್ ತಾಲೇಕರ್, ವಿನಯ್ ಪಾಟೀಲ್, ದಿಲೀಪ್ ಮಾಂಗೋಂಕರ್ ಮತ್ತು ಧನಂಜಯ್ ಅಶ್ತೇಕರ್ ಎಂದು ಗುರುತಿಸಲಾಗಿದೆ. ಇವರು ನೀಡಿದ ಮಾಹಿತಿಯ ಆಧಾರದಲ್ಲಿ ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜೈಪ್ರಕಾಶ್ ಯಾರು?
ಮೂಲತಃ ಪುತ್ತೂರಿನ ಕಬಕದ ಕಲ್ಲುಗುಡ್ಡೆ ಎಂಬಲ್ಲಿನ ಜೈಪ್ರಕಾಶ್ ಕಳೆದ ಆರು ವರ್ಷಗಳ ಹಿಂದೆ ಮಂಗಳೂರಿಗೆ ತನ್ನ ವಾಸಸ್ಥಾನವನ್ನು ಬದಲಾಯಿಸಿಕೊಂಡಿದ್ದ. ಅಲ್ಲಿ ಹಲವಾರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಜೈಪ್ರಕಾಶ್ ಬಳಿಕ 'ಸನಾತನ ಸಂಸ್ಥೆ'ಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆತನ ಪತ್ನಿಯೂ ಸಂಘಟನೆಯ ಕಚೇರಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಳು.

ಆರೋಪಿ ಸತತವಾಗಿ ಪುತ್ತೂರಿನಲ್ಲಿನ ತನ್ನ ಮನೆಗೆ ಭೇಟಿ ನೀಡಿ, ಪ್ರತೀ ಬಾರಿಯೂ ಹೆತ್ತವರಿಗೆ ಧನಸಹಾಯ ಮಾಡುತ್ತಿದ್ದ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಒಮ್ಮಿಂದೊಮ್ಮೆಲೇ ಹಣ ಕಳುಹಿಸುವುದನ್ನು ನಿಲ್ಲಿಸಿ ಬಿಟ್ಟಿದ್ದ.

ಗೋವಾ ಸ್ಫೋಟದಲ್ಲಿ 'ಸನಾತನ ಸಂಸ್ಥೆ'ಯ ಕೈವಾಡವಿರುವುದನ್ನು ಕಂಡುಕೊಂಡಿದ್ದ ಎನ್‌ಐಎ ಇದರ ಹಿಂದೆ ಜೈಪ್ರಕಾಶ್ ಇರುವುದನ್ನೂ ಪತ್ತೆ ಹಚ್ಚಿತ್ತು. ಇದೇ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಎನ್‌ಐಎ, ಪುತ್ತೂರಿನಲ್ಲಿನ ಆರ್‌ಟಿಒ ಕಚೇರಿಯಿಂದ ಜೈ ಪ್ರಕಾಶ್ ಡ್ರೈವಿಂಗ್ ಲೈಸೆನ್ಸ್ ಪಡೆದಿರುವುದನ್ನು ಖಚಿತಪಡಿಸಿಕೊಂಡು ಹಲವು ಮಾಹಿತಿಗಳನ್ನು ಸಂಗ್ರಹಿಸಿತ್ತು.

ಪುತ್ತೂರಿನಲ್ಲಿ ತನಿಖೆ ನಡೆಸಿದ್ದರು...
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಫೆಬ್ರವರಿ 7ರ ಭಾನುವಾರ ಜೈಪ್ರಕಾಶ್ ಹೆತ್ತವರ ಪುತ್ತೂರಿನ ಮನೆಗೆ ದಾಳಿ ನಡೆಸಿದ್ದರು. ಆದರೆ ಅಲ್ಲಿ ಜೈಪ್ರಕಾಶ್ ಪತ್ತೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಹಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದರು.

ಶಂಕಿತ ಆರೋಪಿ ಜೈಪ್ರಕಾಶ್ ತಂದೆ ಸೋಮರಾಜನ್ ಅವರನ್ನು ಈ ಸಂದರ್ಭದಲ್ಲಿ ವಿಚಾರಣೆ ನಡೆಸಲಾಗಿತ್ತು. ಅವರ ಪ್ರಕಾರ ಕಳೆದ ಎರಡು ವರ್ಷಗಳಿಂದ ಮಗ ಮನೆಗೆ ಬಂದಿಲ್ಲ. ಈ ಬಗ್ಗೆ ಆತನಲ್ಲಿ ಪ್ರಶ್ನಿಸಿದಾಗ ಯಾವುದೇ ಖಚಿತ ಉತ್ತರವನ್ನೂ ನೀಡಿಲ್ಲ. ತಾನೇನು ಮಾಡುತ್ತಿದ್ದೇನೆ ಎಂಬುದನ್ನೂ ಆತ ಹೇಳಿಲ್ಲ ಎಂದು ಸೋಮರಾಜನ್ ಎನ್ಐಎ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸನಾತನ ಸಂಸ್ಥೆ ನಿರಾಕರಣೆ....
2009ರ ಅಕ್ಟೋಬರ್ 16ರಂದು ಗೋವಾದ ಮಡ್ಗಾಂವ್ ಎಂಬಲ್ಲಿ ನಡೆದಿದ್ದ ಸ್ಫೋಟದ ಹಿಂದೆ ಹಿಂದೂ ಬಲಪಂಥೀಯ ಸಂಘಟನೆ 'ಸನಾತನ ಸಂಸ್ಥೆ'ಯಿದೆ ಎಂದು ರಾಜ್ಯ ಸರಕಾರ ಆರೋಪಿಸುತ್ತಾ ಬಂದಿದ್ದು, ಇದೇ ಸಂಘಟನೆಗೆ ಸೇರಿದ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಇದೀಗ ಎನ್‌ಐಎ ಹೇಳಿಕೊಂಡಿದೆ.

ಆದರೆ ಸನಾತನ ಸಂಸ್ಥೆಯು ಈ ಆರೋಪಗಳನ್ನು ತಳ್ಳಿ ಹಾಕುತ್ತಲೇ ಬಂದಿದೆ. ಹಿಂದೂ ಸಂಘಟನೆಯ ಮೇಲೆ ಮಸಿ ಬಳಿಯುವ ಯತ್ನದಂಗವಾಗಿ ಪಿತೂರಿ ನಡೆಸಲಾಗಿದೆ. ಈ ಸಂಘಟನೆ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಘಟನೆ ಪ್ರತಿಕ್ರಿಯಿಸಿತ್ತು.

ಈ ಬಾಂಬ್ ಸ್ಫೋಟದಲ್ಲಿ ಮಾಲ್ಗೊಂಡಾ ಪಾಟೀಲ್ ಮತ್ತು ಯೋಗೇಶ್ ನಾಯ್ಕ್ ಎಂಬ ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದರು. ಸ್ಕೂಟರಿನಲ್ಲಿ ಬೇರೆಡೆಗೆ ಬಾಂಬ್ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮತ್ತಾಗಿ ಸ್ಫೋಟಗೊಂಡಿತ್ತು ಎಂದು ಗೋವಾ ಪೊಲೀಸರು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ