ಬಾಂಬ್ ದಾಳಿ: ಪತಿ ಕಾಬೂಲ್‌ನಲ್ಲಿ ಸತ್ತದ್ದು ಪತ್ನಿಗೇ ಗೊತ್ತಿಲ್ಲ!
ಕಾಬೂಲ್ ನಗರದ ಮಧ್ಯಭಾಗದಲ್ಲಿ ವಿದೇಶಿ ಪ್ರವಾಸಿಗರು ವಾಸಿಸುತ್ತಿದ್ದ ಹೋಟೆಲ್‌ಗಳ ಮೇಲೆ ಐವರು ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿ ಎರಡು ದಿನಗಳೇ ಕಳೆದರೂ, ಆ ದುರ್ಘಟನೆಯಲ್ಲಿ ಮಡಿದ ಭಾರತದ ಖ್ಯಾತ ತಬಲಾ ವಾದಕ ನವಾಬ್ ಖಾನ್ ಅವರ ಪತ್ನಿಗೆ ತನ್ನ ಪತಿಯ ಸಾವಿನ ಸುದ್ದಿ ತುಳಿದಿಲ್ಲ. ಭಾರತದ ಟಿವಿ ಚಾನಲ್‌ಗಳು ಸುದ್ದಿ ಬಿತ್ತರಿಸುತ್ತಿದ್ದರೂ, ನವದೆಹಲಿಯ ಲಕ್ಷ್ಮಿ ನಗರದಲ್ಲಿ ವಾಸಿಸುತ್ತಿದ್ದ ನವಾಬ್ ಖಾನ್ ಅವರ ಮನೆಯಲ್ಲಿ ಟಿವಿಗಳು ಆನ್ ಆಗಿರಲಿಲ್ಲ. ಕಾರಣ ಪತ್ನಿಗೆ ವಿಷಯವೇ ಗೊತ್ತಿಲ್ಲ!
ಎರಡು ದಿನಗಳ ಹಿಂದೆ ನಡೆದ ಕಾಬೂಲ್ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತೀಯ ಮೂಲದ 9 ಮಂದಿ ಸಾವನ್ನಪ್ಪಿದ್ದರು. ಈ ಒಂಬತ್ತು ಮಂದಿಯಲ್ಲಿ ಭಾರತದ ಖ್ಯಾತ ತಬಲಾ ಮಾಂತ್ರಿಕ ನವಾಬ್ ಖಾನ್ ಕೂಡಾ ಸೇರಿದ್ದರು. ಅವರ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕಳುಹಿಸಿ, ಅವರ ಕುಟುಂಬಕ್ಕೆ ನೀಡಲಾಗಿತ್ತು. ನವಾಬ್ ಖಾನ್ ಅವರ ಪತ್ನಿ ತೀವ್ರ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಕುಟುಂಬಸ್ಥರು ಅವರಿಗೆ ಈ ಸಾವಿನ ಸುದ್ದಿ ತಿಳಿಸಲೇ ಇಲ್ಲ. ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಸುಳ್ಳು ಹೇಳಲಾಗಿತ್ತು. ಪತಿಯ ಸಾವಿನ ಸುದ್ದಿ ಕೇಳಿದರೆ ಮಿದುಳು ಸ್ರಾವದಿಂದ ಪತ್ನಿಯೂ ಅಸುನೀಗಬಹುದೆಂಬ ಭಯ ಕುಟುಂಬಸ್ಥರಿಗೆ.
52ರ ಹರೆಯದ ನವಾಬ್ ಖಾನ್ ಸರ್ಕಾರದ ವತಿಯಿಂದ ಭಾರತೀಯ ಸಾಂಸ್ಕೃತಿಕ ಸಂಬಂಧ ಸುಧಾರಿಸಲೋಸ್ಕರ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಫ್ಘಾನಿಸ್ತಾನಕ್ಕೆ ತೆರಳಿದ್ದರು. ಕೇಂದ್ರ ಕಾಬೂಲಿನ ಸಫಿ ಲ್ಯಾಂಡ್ ಮಾರ್ಕ್ ಹೊಟೇಲಿನಲ್ಲಿ ಅವರು ಉಳಿದುಕೊಂಡಿದ್ದರು. ಆದರೆ ದುರದೃಷ್ಟವಶಾತ್ ಈ ಹೋಟೇಲ್ ಆತ್ಮಾಹುತಿ ಬಾಂಬ್ ದಾಳಿಗೆ ಒಳಗಾಗಬೇಕಾಯಿತು.