ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ 26/11ರ ಮುಂಬೈ ದಾಳಿಯನ್ನು ಹೋಲುವಂಥದ್ದಾಗಿದ್ದು, ಇದು ನೇರವಾಗಿ ಭಾರತೀಯರ ಮೇಲೆಯೇ ಗುರಿಯನ್ನು ಹೊಂದಲಾಗಿತ್ತು ಎಂದು ಭದ್ರತಾ ಅಧಿಕಾರಿಗಳ ಮೂಲಗಳು ತಿಳಿಸಿವೆ.
9 ಮಂದಿ ಭಾರತೀಯರನ್ನು ಬಲಿ ತೆಗೆದುಕೊಂಡ ಈ ಆತ್ಮಾಹುತಿ ಬಾಂಬ್ ದಾಳಿ ಎರಡು ಹೊಟೇಲುಗಳ ಮೇಲೆ ಗುರಿಯಾಗಿ ನಡೆದಿತ್ತು. ಈ ದಾಳಿಯಲ್ಲಿ ತಾಲಿಬಾನ್ ಕೈವಾಡದ ಶಂಕೆಯನ್ನು ತನಖಾಧಿಕಾರಿಗಳು ವ್ಯಕ್ತಪಡಿಸಿದ್ದು, ಲಷ್ಕರ್ ಇ ತೊಯ್ಯಬಾದ ಹಕ್ಕನಿ ಸಂಘಟನೆ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರಬಹುದೆಂದು ಅಂದಾಜಿಸಲಾಗಿದೆ.
ಈ ದಾಳಿಯನ್ನು ತುಂಬ ವ್ಯವಸ್ಥಿತವಾಗಿ ಮಾಡಲಾಗಿದ್ದು, ಪ್ರತಿ ಉಗ್ರರೂ ತಮ್ಮೊಳಗೆ ಅತ್ಯುತ್ತಮ ಸಂವಹನ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ, ಮೊದಲು ಬಾಂಬ್ ಸಿಡಿಸಿ ಆಮೇಲೆ ತಮ್ಮ ಗುರಿಯತ್ತ ದೃಷ್ಟಿ ಹರಿಸಿರುವ ಉಗ್ರರು ಥೇಟ್ ಮುಂಬೈಯ 26/11 ದಾಳಿಯ ಮಾದರಿಯಲ್ಲೇ ನಡೆಸಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಆರರಿಂದ ಎಂಟು ಉಗ್ರರು ಈ ದಾಳಿಯಲ್ಲಿ ಭಾಗವಹಿಸಿದ್ದರೆಂದು ಅಂದಾಜಿಸಲಾಗಿದ್ದು, ಎರಡರಿಂದ ಮೂರು ಮಂದಿ ಅಫ್ಘನ್ ರಕ್ಷಣಾ ಸಿಬ್ಬಂದಿಗಳ ಗುಂಡಿಗೆ ಸಾವನನಪ್ಪಿದ್ದಾರೆ ಎನ್ನಲಾಗಿದೆ.
ಭಾರತೀಯರ ಮೇಲಿನ ದಾಳಿಯ ಸಂಭವ ಇನ್ನೂ ಇದ್ದು, ಈ ಬಗ್ಗೆ ವಿಚಕ್ಷಣಾ ದಳ ವ್ಯಾಪಕ ಮುನ್ನೆಚ್ಚರಿಕೆಯನ್ನೂ ನೀಡಿದೆ.