ನಾವು ಯುದ್ಧ ಪ್ರಿಯರಲ್ಲ; ದೇಶದ ಪ್ರತಿ ಇಂಚಿಗೂ ರಕ್ಷಣೆ: ಆಂಟನಿ
ಪೋಖ್ರಾನ್, ಸೋಮವಾರ, 1 ಮಾರ್ಚ್ 2010( 11:18 IST )
ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ, ಯಾವುದೇ ಬೆದರಿಕೆಗಳನ್ನು ಎದುರಿಸಲು ಭಾರತ ಸಿದ್ಧವಾಗಿದೆ; ನಮ್ಮ ಭೂಮಿಯ ಪ್ರತೀ ಇಂಚನ್ನೂ ರಕ್ಷಿಸಲಾಗುತ್ತದೆ. ನಮ್ಮ ಭದ್ರತಾ ಪಡೆಗಳು ದಿನಾರಾತ್ರಿ ಹೋರಾಟಕ್ಕೆ ಸಿದ್ಧವಾಗಿವೆ. ಆದರೆ ನಾವು ಯುದ್ಧಪ್ರಿಯರಲ್ಲ ಎಂದಿದ್ದಾರೆ.
ರಾಜಸ್ತಾನದ ಪೋಖ್ರಾನ್‌ನಲ್ಲಿ ನಡೆದ ವಾಯುದಳದ 'ವಾಯು ಶಕ್ತಿ' ಪ್ರದರ್ಶನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಆಂಟನಿ, ದೇಶವು ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದರು.
ಭಾರತವು ಸುರಕ್ಷಿತವಾಗಿದೆ ಎಂಬ ಭರವಸೆ ನೀಡಲು ನಾನು ಇಚ್ಛಿಸುತ್ತಿದ್ದೇನೆ. ನಮ್ಮ ಪ್ರತೀ ಇಂಚು ಭೂಮಿಯನ್ನೂ ರಕ್ಷಿಸಲಾಗುತ್ತದೆ. ಯಾವುದೇ ಭಾಗದಿಂದ ಬರುವ ಬೆದರಿಕೆಗಳಿಗೆ ನಾವು ಚಿಂತಿತರಾಗಿಲ್ಲ. ಕಳೆದೊಂದು ವರ್ಷದಿಂದ ನಮ್ಮ ಭದ್ರತಾ ಪಡೆಗಳು 24/7 ಹೋರಾಟಕ್ಕೆ ಸಿದ್ಧವಾಗಿವೆ. ಅದೇ ಹೊತ್ತಿಗೆ ನಾವು ಯುದ್ಧ ಪ್ರಿಯರೂ ಅಲ್ಲವೆಂಬುದನ್ನು ಹೇಳುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ಭಾರತವು ಪಾಕಿಸ್ತಾನದ ಜತೆ ಮಾತುಕತೆಗೆ ಸಿದ್ಧವಾಗದೇ ಇದ್ದರೆ ಯುದ್ಧಕ್ಕೆ ಸಿದ್ಧವಾಗಬೇಕು ಎಂಬ ಪ್ರಚೋದನಾಕಾರಿ ಹೇಳಿಕೆಯನ್ನು ಲಷ್ಕರ್ ಇ ತೋಯ್ಬಾ ಸಂಘಟನೆಯ ಉಪ ಸಂಘಟನೆ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ನೀಡಿದ್ದ.
ಭಾರತದ ವಿರುದ್ಧ ತನ್ನ ನೆಲದಿಂದ ಭಯೋತ್ಪಾದನೆಗೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನವು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಂಟನಿ, ಈಗಲೂ ಪಾಕಿಸ್ತಾನದಲ್ಲಿ 42 ಭಯೋತ್ಪಾದನಾ ತರಬೇತಿ ಶಿಬಿರಗಳು ಕಾರ್ಯಪ್ರವೃತ್ತವಾಗಿವೆ. ಅವುಗಳನ್ನು ನಿಷ್ಕ್ರಿಯಗೊಳಿಸಲು ಯಾವುದೇ ಗಂಭೀರ ಯತ್ನವನ್ನು ನಡೆಸಲಾಗಿಲ್ಲ. ನಮ್ಮ ಆತಂಕಕ್ಕೆ ಪ್ರಮುಖ ಕಾರಣವೇ ಇದು ಎಂದರು.
ಅದೇ ಹೊತ್ತಿಗೆ ಪಾಕಿಸ್ತಾನದ ಜತೆಗಿನ ಇತ್ತೀಚಿನ ಮಾತುಕತೆಯನ್ನು ನಾವು ವಿಫಲ ಮಾತುಕತೆ ಎಂದು ಪರಿಗಣಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದು ಕೇವಲ ಆರಂಭ ಮಾತ್ರ, ಇದರಿಂದ ಹೆಚ್ಚಿನ ನಿರೀಕ್ಷೆಗಳನ್ನು ನಾವು ಇಟ್ಟಿರಲಿಲ್ಲ ಎಂದರು.