ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸ್ವಾಮೀಜಿ'ಗೆ ಪಿತೃವಾತ್ಸಲ್ಯ; ಕಾಮಕಾಂಡ ನಿಜವಲ್ಲ, ಕಟ್ಟುಕತೆ!
(Godman | sex racket | Shiv Murat Dwivedi | prostitution business)
ಇಂಟರ್‌ನೆಟ್ ಮೂಲಕ ಹುಡುಗಿಯರನ್ನು ಆಕರ್ಷಿಸಿ, ವ್ಯವಹಾರ ಕುದುರಿಸುತ್ತಾ ದೇಶದ ಹಲವು ಕಡೆಗಳಲ್ಲಿ ಅಪಾರ ಆಸ್ತಿ ಮಾಡಿಕೊಂಡಿರುವ ನಕಲಿ ದೇವಮಾನವನ ಮೇಲಿನ ಆರೋಪಗಳನ್ನು ಆತನ ತಂದೆ ತಳ್ಳಿ ಹಾಕಿದ್ದು, ಎಲ್ಲಿಂದಲೋ ತಂದ ಹುಡುಗಿಯರನ್ನು ಆಶ್ರಮದಲ್ಲಿ ಬಿಟ್ಟು ಸುಳ್ಳೇಸುಳ್ಳು ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವಯಂಘೋಷಿತ 'ಸ್ವಾಮೀಜಿ' ಶಿವ ಮುರುತ್ ದ್ವಿವೇದಿ (39) ಆಲಿಯಾಸ್ 'ಇಚ್ಚಾಧರಿ ಸಂತ್ ಸ್ವಾಮಿ ಭೀಮಾನಂದ್ ಜೀ ಮಹಾರಾಜ್' ಎಂಬಾತನನ್ನು ಕೆಲವು ದಿನಗಳ ಹಿಂದಷ್ಟೇ ಹೈಟೆಕ್ ವೇಶ್ಯಾವಾಟಿಕೆ ಆರೋಪದ ಮೇಲೆ ದೆಹಲಿಯಲ್ಲಿ ಬಂಧಿಸಲಾಗಿತ್ತು.
ಆದರೆ ಇದು ಪೊಲೀಸರ ಮತ್ತು ರಾಜಕಾರಣಿಗಳ ಕುತಂತ್ರ ಎಂದು ಆತನ ತಂದೆ ಬಚ್ಚಾಲಾಲ್ ದ್ವಿವೇದಿ ಆರೋಪಿಸುತ್ತಾರೆ. ಅವರ ಪ್ರಕಾರ ಮಾಂಸ ದಂಧೆ ನಡೆಸುವ ವ್ಯಕ್ತಿತ್ವ ತನ್ನ ಮಗನದ್ದಲ್ಲ.
ಆತ 10 ವರ್ಷಗಳ ಹಿಂದೆ ಪ್ರಥಮ ವರ್ಷದ ಪಿಯುಸಿಯಲ್ಲಿ ಫೇಲಾದ ಬಳಿಕ ಮನೆ ಬಿಟ್ಟು ಹೋಗಿದ್ದ. ಆದರೆ ಇಂತಹ ದುಷ್ಟ ಕೆಲಸಗಳಲ್ಲಿ ಪಾಲ್ಗೊಳ್ಳುವವನು ಆತನಲ್ಲ. ನನ್ನ ಪ್ರಕಾರ ಇದರಲ್ಲಿ ಆತನ ರಾಜಕೀಯ ಹಿಂಬಾಲಕರ ಕೈವಾಡವಿದೆ. ನವದೆಹಲಿಯ ಬೇರೆಡೆಯಿಂದ ಹುಡುಗಿಯರನ್ನು ಎತ್ತಿಕೊಂಡು ಬಂದು ಆತನ ಆಶ್ರಮದಲ್ಲಿ ಬಿಟ್ಟು ಬಳಿಕ ಬಂಧಿಸುವ ನಾಟಕ ಮಾಡಲಾಗಿದೆ ಎಂದು ನಕಲಿ ದೇವಮಾನವನ ತಂದೆ ಆರೋಪಿಸುತ್ತಾರೆ.
ಈತನದ್ದು ಹೈಟೆಕ್ ವ್ಯವಹಾರ... ದೇಶದ ಹಲವು ನಗರಗಳ ನೂರಾರು ಹುಡುಗಿಯರು ಆತನ ಸುಪರ್ದಿಯಲ್ಲಿದ್ದಾರೆ. ಕುಟುಂಬದಿಂದ ಹೊರಗಿರುವ ಹುಡುಗಿಯರನ್ನು ಆತ ಇಂಟರ್ನೆಟ್ ಮೂಲಕ ಬಲೆಗೆ ಹಾಕಿಕೊಳ್ಳುತ್ತಿದ್ದ. ಹಣ ಗಳಿಸಲು ಅಡ್ಡ ದಾರಿಗಳನ್ನು ಹುಡುಕುತ್ತಿರುವ ಹುಡುಗಿಯರನ್ನು ಆತ ಹೆಚ್ಚಾಗಿ ಗುರಿ ಮಾಡಿಕೊಳ್ಳುತ್ತಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುಮಾರು 100ಕ್ಕೂ ಹೆಚ್ಚು ಹುಡುಗಿಯರು ಆತನ ಸುಪರ್ದಿಯಲ್ಲಿದ್ದರೆ, 500ಕ್ಕೂ ಹೆಚ್ಚು ಹುಡುಗಿಯರು ಸಂಪರ್ಕದಲ್ಲಿರುತ್ತಿದ್ದರು. ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಆತ ಹುಡುಗಿಯನ್ನು ಪೂರೈಸುತ್ತಾ ದೇವರ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಹಲವು ದೇವಸ್ಥಾನಗಳು, ಆಸ್ಪತ್ರೆಗಳನ್ನು ಕಟ್ಟಿಸಿಕೊಂಡಿರುವ ಈತನನ್ನು ಇಬ್ಬರು ಗಗನಸಖಿಯರು, ಓರ್ವ ಬಾಲಿವುಡ್ ಆಕಾಂಕ್ಷಾ ನಟಿ ಮತ್ತು ಪ್ರಖ್ಯಾತ ಕಾಲೇಜೊಂದರ ಎಂಬಿಎ ವಿದ್ಯಾರ್ಥಿನಿ ಹಾಗೂ ಪಿಂಪ್ ಜತೆ ಕಳೆದ ವಾರ ಬಂಧಿಸಲಾಗಿತ್ತು. ಬಂಧಿತ ಯುವತಿಯರು 22ರಿಂದ 25 ವರ್ಷದೊಳಗಿನವರಾಗಿದ್ದರು.
ಸ್ವಾಮೀಜಿಗೆ ಬೆಂಗಳೂರಿನಲ್ಲೂ ಆಸ್ತಿ.... ಹತ್ತಾರು ವರ್ಷಗಳಿಂದ ಚರ್ಮ ದಂಧೆ ನಡೆಸಿಕೊಂಡು ಬರುತ್ತಿದ್ದಾನೆ ಎಂದು ಆರೋಪಿಸಲಾಗಿರುವ ನಕಲಿ ದೇವಮಾನವ ನವದೆಹಲಿ ಮಾತ್ರವಲ್ಲದೆ ಬೆಂಗಳೂರು, ಪುಣೆ, ವಾರಣಾಸಿ, ಲಕ್ನೋಗಳಲ್ಲೂ ಆಸ್ತಿ-ಪಾಸ್ತಿಗಳನ್ನು ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೆಹಲಿಯ ಕಾನ್ಪುರದಲ್ಲಿ ಮಂದಿರವೊಂದನ್ನು ಕಟ್ಟಿಸಿಕೊಂಡಿದ್ದ ಈತ ನಗರದ ಐಷಾರಾಮಿ ಕಾಲೊನಿಗಳಾದ ಸಿಆರ್ ಪಾರ್ಕ್, ಸೆಕ್ಟರ್ 3 ಆರ್‌ಕೆ ಪುರಂ, ಭಿಕಾಜಿ ಕಾಮಾ ಪ್ಯಾಲೇಸ್ (ಮೊಹಮದಪುರ್), ಸಪ್ಧರ್ಜಂಗ್ ಎನ್‌ಕ್ಲೇವ್ (ಹುಮಾಯುನ್‌ಪುರ್) ಮತ್ತು ಡೆಲ್ವಿ (ಜವಾಹರ್ ಪಾರ್ಕ್)ಗಳಲ್ಲೂ ತನ್ನ ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ತನಿಖೆಯ ಸಂದರ್ಭದಲ್ಲಿ ಕಂಡುಕೊಂಡಿದ್ದಾರೆ.
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಚಿವರು ಸೇರಿದಂತೆ ಹಲವು ರಾಜಕಾರಣಿಗಳ ಜತೆ ಸಂಬಂಧ ಹೊಂದಿರುವ ಈ ನಕಲಿ ಸ್ವಾಮೀಜಿಗೆ ಲಕ್ಷಾಂತರ ಮಂದಿ ಭಕ್ತರಿದ್ದಾರೆ. ಹಲವು ಗಣ್ಯ ವ್ಯಕ್ತಿಗಳ ಸಂಪರ್ಕಗಳನ್ನು ತನಿಖೆ ನಡೆಸಲಾಗುತ್ತಿದೆ. ಅವರು ಕೇವಲ ಅನುಯಾಯಿಗಳಾಗಿದ್ದರೇ ಅಥವಾ ದಂಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.