ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅತಿ ನಂಬಿಗಸ್ತ ವ್ಯಕ್ತಿ' ಕಲಾಂ; ಸೋನಿಯಾಗೆ 72ನೇ ಸ್ಥಾನ..!
(most trusted person | APJ Abdul Kalam | Ratan Tata | Kiran Bedi)
ಮಾಜಿ ರಾಷ್ಟ್ರಪತಿ ಹಾಗೂ ದೇಶದ ಹೆಮ್ಮೆಯ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ಅತಿ ನಂಬಿಗಸ್ತ ವ್ಯಕ್ತಿ ಎಂದು ಸಮೀಕ್ಷೆಯೊಂದು ತಿಳಿಸಿದ್ದು, ಬಹುತೇಕ ಮಂದಿ ಅವರನ್ನು ಮಹಾತ್ಮಾ ಗಾಂಧೀಜಿಯವರಿಗೆ ಹೋಲಿಸಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಈ ಸಾಲಿನಲ್ಲಿ ಜನ 72ನೇ ಸ್ಥಾನದಲ್ಲಿ ಗುರುತಿಸಿದ್ದಾರೆ.
'ರೀಡರ್ಸ್ ಡೈಜೆಸ್ಟ್' ನಡೆಸಿದ ಈ ಸಮೀಕ್ಷೆಯಲ್ಲಿ ಭಾರತದ ಕ್ಷಿಪಣಿ ಕಾರ್ಯಕ್ರಮ ಪ್ರವೀಣ 78ರ ಹರೆಯದ ಕಲಾಂ ಯುವ ಭಾರತೀಯರ ಮಾದರಿ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.
ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಕಲಾಂ ಅವರನ್ನು ಮಹಾತ್ಮಾ ಗಾಂಧಿಯವರಿಗೆ ಹೋಲಿಸಿದ್ದಾರೆ. 'ಕಲಾಂ ಅವರು ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು' ಎಂದು 34ರ ಹರೆಯದ ವ್ಯಕ್ತಿಯೊಬ್ಬರು ಹೇಳಿದ್ದರೆ, ಮತ್ತೊಬ್ಬರು, 'ಕಲಾಂ ಅವರನ್ನು ಈ ಪೀಳಿಗೆಯ ಗಾಂಧಿ ಎಂದು ಕರೆಯಬಹುದು' ಎಂದಿದ್ದಾರೆ.
ಈಗಿನ ರಾಷ್ಟ್ರಪತಿಗೆ 67ನೇ ಸ್ಥಾನ... ರೀಡರ್ಸ್ ಡೈಜೆಸ್ಟ್ ನಡೆಸಿರುವ ಭಾರತದ ಅಗ್ರ 100 ನಂಬಿಗಸ್ತ ವ್ಯಕ್ತಿಗಳ ಸಮೀಕ್ಷೆಯಲ್ಲಿ ಈಗಿನ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರು 67ನೇ ಸ್ಥಾನದಲ್ಲಿದ್ದಾರೆ.
ನ್ಯಾನೋ ಕಾರು ಸೇರಿದಂತೆ ಹಲವು 'ಟಾಟಾ' ವಾಹನಗಳ ಮೂಲಕ ದೇಶದ ಮಧ್ಯಮ ವರ್ಗವನ್ನು ಸೆಳೆದಿರುವ ರತನ್ ಟಾಟಾ ಎರಡನೇ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ಫೋಸಿಸ್ ಸಹಸಂಸ್ಥಾಪಕ, ಕರ್ನಾಟಕದ ನಾರಾಯಣ ಮೂರ್ತಿ ನಾಲ್ಕನೇ ನಂಬಿಗಸ್ತ ವ್ಯಕ್ತಿಯಾಗಿ ಗುರುತಿಸಿಕೊಂಡರೆ, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ನಂತರದ ಸ್ಥಾನಗಳಲ್ಲಿದ್ದಾರೆ.
ಸೋನಿಯಾ ಗಾಂಧಿಗೆ 72ನೇ ಸ್ಥಾನ! ವಿಶೇಷ ಎಂದರೆ ರಾಜಕಾರಣಿಗಳನ್ನು ಜನ ನಂಬಿಗಸ್ತರ ಸಾಲಿನಲ್ಲಿ ಕೊನೆಯಲ್ಲಿಟ್ಟಿರುವುದು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು 72ನೇ ಸ್ಥಾನದಲ್ಲಿ ಜನತೆ ಗುರುತಿಸಿದ್ದರೆ, ಅವರ ಪುತ್ರ, ಮುಂದಿನ ಪ್ರಧಾನಿ ಎಂದೇ ಬಿಂಬಿಸಲ್ಪಡುತ್ತಿರುವ ರಾಹುಲ್ ಗಾಂಧಿ 29ನೇ ಸ್ಥಾನದಲ್ಲಿದ್ದಾರೆ.
ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯವರನ್ನು ಜನ 94ನೇ ಸ್ಥಾನಕ್ಕೆ ತಳ್ಳಿದ್ದಾರೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಏಳನೇ ಸ್ಥಾನ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಎಂಟು ಮತ್ತು ಒಂಬತ್ತನೇ ನಂಬಿಗಸ್ತ ವ್ಯಕ್ತಿಗಳೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಗುರುತಿಸಿದ್ದಾರೆ.