ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಕ್ರಮ ಕೈಗೊಂಡರೆ ಒಂದು ಹೆಜ್ಜೆ ಮುಂದಿಡಲು ಸಿದ್ಧ: ಭಾರತ (India | Pakistan | War against terrorism | Manmohan Singh)
Bookmark and Share Feedback Print
 
ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಭಾರತವು ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ ಎಂದು ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೋಮವಾರ ಹೇಳಿದ್ದಾರೆ.

ಸೌದಿ ಅರೇಬಿಯಾದ ಸಂಸತ್ 'ಮಜ್ಲಿಸ್ ಅಲ್ ಶೌರಾ'ದಲ್ಲಿ ಮಾತನಾಡುತ್ತಿದ್ದ ಸಿಂಗ್, ಶಾಶ್ವತ ಶಾಂತಿಗಾಗಿ ಭಾರತವು ಪಾಕಿಸ್ತಾನದೊಂದಿಗೆ ಸಹಕಾರಿ ಸಂಬಂಧವನ್ನು ಎದುರು ನೋಡುತ್ತಿದೆ ಎಂದರು.

ನಾವು ಪಾಕಿಸ್ತಾನದ ಜತೆ ಅತ್ಯುತ್ತಮ ಸಹಕಾರವನ್ನು ಹೊಂದಿರುವ ಸಂಬಂಧವನ್ನು ಬಯಸುತ್ತಿದ್ದೇವೆ. ನಮ್ಮ ಪ್ರಮುಖ ಉದ್ದೇಶ ಶಾಶ್ವತವಾದ ಶಾಂತಿ ನೆಲೆಸುವಂತೆ ಮಾಡುವುದು. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಅತ್ಯುತ್ತಮ ಸಂಬಂಧವಿದ್ದರೆ, ವ್ಯಾಪಾರ, ಪ್ರಯಾಣ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತವೆ. ಇದು ಎರಡೂ ದೇಶಗಳ ಅಭ್ಯುದಯ ಸೃಷ್ಟಿಗೆ ಮಾತ್ರ ಕಾರಣವಾಗುವುದಲ್ಲ, ಜತೆಗೆ ಇಡೀ ದಕ್ಷಿಣ ಏಷಿಯಾವೇ ಇದರ ಪ್ರಭಾವಕ್ಕೊಳಗಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಆದರೆ ಇದೆಲ್ಲ ಸಾಧ್ಯವಾಗಬೇಕಾದರೆ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ತನ್ನ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು.

ಪಾಕಿಸ್ತಾನವು ಒಂದು ವೇಳೆ ಭಾರತದೊಂದಿಗೆ ಸಹಕರಿಸಿದರೆ, ಆಗ ನಮ್ಮಿಂದ ಬಗೆಹರಿಸಲಾಗದ ಯಾವುದೇ ಸಮಸ್ಯೆಗಳು ಉಳಿಯುವುದಿಲ್ಲ. ಹಾಗಾದಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯವನ್ನೇ ತೆರೆಯುತ್ತೇವೆ ಎಂದು ಶ್ರೀಮಂತ ತೈಲ ರಾಜಧಾನಿಯ ಮೂರು ದಿನಗಳ ಪ್ರವಾಸದಲ್ಲಿರುವ ಸಿಂಗ್ ತಿಳಿಸಿದ್ದಾರೆ.

ಭಾರತ ಮತ್ತು ಸೌದಿ ಅರೇಬಿಯಾ ಎರಡೂ ದೇಶಗಳು ಭಯೋತ್ಪಾದನೆ ಮತ್ತು ಹಿಂಚಾಚಾರಗಳ ಬೆದರಿಕೆಗಳನ್ನು ಎದುರಿಸುತ್ತಿವೆ ಎಂದು ಉಲ್ಲೇಖಿಸಿದ ಪ್ರಧಾನಿ, ಭಯೋತ್ಪಾದನೆ ಎಂಬ ಪೀಡೆಯನ್ನು ಎದುರಿಸಲು ಸ್ಪಷ್ಟ ನಿಲುವು ಮತ್ತು ಸಂಘಟಿತ ಯತ್ನ ಅಗತ್ಯವೆಂಬುದನ್ನು ನಮಗೆ ಇತಿಹಾಸ ಕಲಿಸಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ