ತೃಣಮೂಲ ಕಾಂಗ್ರೆಸ್ ಯುಪಿಎಯಲ್ಲೇ ಮುಂದುವರಿಯುತ್ತದೆ ಎಂದು ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿದ್ದ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದು, ಮಿತ್ರಕೂಟದಲ್ಲಿ ಭಿನ್ನಮತ ಸೃಷ್ಟಿಸಲು ಯತ್ನಿಸುವ ಪಿತೂರಿದಾರರ ತಂತ್ರಗಳು ಫಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವರು ನಮ್ಮ ಮಿತ್ರಕೂಟದಲ್ಲಿ (ಕಾಂಗ್ರೆಸ್ ಜತೆ) ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನಮ್ಮ ನಡುವೆ ಗೊಂದಲ ಸೃಷ್ಟಿಗೆ ಯಾರೂ ಯತ್ನಿಸಬಾರದು ಎಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಜನತೆಯ ಕಳವಳಗಳ ಕುರಿತ ಹಲವು ವಿಚಾರಗಳನ್ನು ಎತ್ತುತ್ತಾ ನಾವು ಯುಪಿಎ ಸರಕಾರದಲ್ಲೇ ಮುಂದುವರಿಯುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ 'ಬಂಗಾಲಿ ಟೀವಿ'ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಕ್ಷವು ಬಡವರ ಪರವಾಗಿಯೇ ಮುಂದುವರಿಯುತ್ತದೆ. ರಸಗೊಬ್ಬರ ಮತ್ತು ಇಂಧನ ಬೆಲೆ ಏರಿಕೆಯನ್ನು ಯಾವತ್ತೂ ಬೆಂಬಲಿಸುವುದಿಲ್ಲ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದು, ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿರುವ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ದರ ಹೆಚ್ಚಳ ಸಾಮಾನ್ಯ ಜನರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತದೆಯಾದ್ದರಿಂದ ಇದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನಾನು ಈಗಾಗಲೇ ಪ್ರಧಾನ ಮಂತ್ರಿ ಮತ್ತು ಸೋನಿಯಾ ಗಾಂಧಿಯವರಿಗೆ ಒತ್ತಾಯಿಸಿದ್ದೇನೆ. ಇಲ್ಲಿ ಕಚ್ಚಾಟದ ಪ್ರಶ್ನೆಯಿಲ್ಲ ಎಂದು ರೈಲ್ವೇ ಸಚಿವೆ ಬ್ಯಾನರ್ಜಿ ತಿಳಿಸಿದ್ದಾರೆ.
ರೈಲ್ವೇ ಸರಕು ಸಾಗಣೆ ಮೇಲಿನ ಸೇವಾ ತೆರಿಗೆ ವಿನಾಯಿತಿಯನ್ನು ಹಿಂದಕ್ಕೆ ಪಡೆದಿರುವ ನಿರ್ಧಾರವನ್ನು ಕೂಡ ಬ್ಯಾನರ್ಜಿಯವರು ವಿರೋಧಿಸಿದ್ದು, ಇದರಿಂದ ಇಲಾಖೆಯು 6,000 ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ ಎಂದಿದ್ದಾರೆ.
ಈ ಸಂಬಂಧ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದು, ಬಜೆಟ್‌ನಲ್ಲಿ ರೈಲ್ವೇ ಮೇಲೆ ಹೇರಲಾಗಿರುವ ಸೇವಾ ತೆರಿಗೆಯನ್ನು ಹಿಂದಕ್ಕೆ ಪಡೆದುಕೊಳ್ಳಲಿದ್ದಾರೆ ಎಂಬ ಭರವಸೆಯಿದೆ ಎಂದು ತಿಳಿಸಿದ್ದಾರೆ.