ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲ್ ದರಯೇರಿಕೆ ಹಿಂತೆಗೆತವಿಲ್ಲ: ಪ್ರಧಾನಿ ಸಿಂಗ್ ಸ್ಪಷ್ಟನೆ
(Petro price hike | Prime Minister | Manmohan Singh | economy)
ಪೆಟ್ರೋಲ್ ದರಯೇರಿಕೆ ಹಿಂತೆಗೆತವಿಲ್ಲ: ಪ್ರಧಾನಿ ಸಿಂಗ್ ಸ್ಪಷ್ಟನೆ
ಪ್ರಧಾನಿಯವರ ವಿಶೇಷ ವಿಮಾನದಿಂದ, ಮಂಗಳವಾರ, 2 ಮಾರ್ಚ್ 2010( 11:08 IST )
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳನ್ನು ಸೋಮವಾರ ತಳ್ಳಿ ಹಾಕಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಹಣದುಬ್ಬರದ ಮೇಲೆ ದುಷ್ಪರಿಣಾಮ ಬೀರದೆ ಬೆಲೆಯೇರಿಕೆಯನ್ನು ತಡೆದುಕೊಳ್ಳುವ ಶಕ್ತಿ ದೇಶದ ಅರ್ಥವ್ಯವಸ್ಥೆಗಿದೆ ಎಂದಿದ್ದಾರೆ.
ದರಗಳಲ್ಲಿ ಯಾವುದೇ ರೀತಿಯ ಹೆಚ್ಚಳವು ಕೆಲವು ಜನರನ್ನು ಬಾಧಿಸದು. ಆದರೆ ನಾವು ಇದನ್ನು ದೂರದೃಷ್ಟಿಯಿಂದ ನೋಡಬೇಕಾದ ಅಗತ್ಯವಿದೆ ಎಂದು ಸೌದಿ ಅರೇಬಿಯಾ ಪ್ರವಾಸದಿಂದ ಪತ್ರಕರ್ತರೊಂದಿಗೆ ತಾಯ್ನಾಡಿಗೆ ವಾಪಸಾಗುತ್ತಿದ್ದಾಗ ಅವರು ತಿಳಿಸಿದರು.
ಆ ರೀತಿಯ ಜನಪ್ರಿಯ ವಿತ್ತೀಯ ನೀತಿಗಳು ಭಾರತದ ಆರ್ಥಿಕತೆಯ ಮೇಲೆ ದೂರಗಾಮಿ ದುಷ್ಪರಿಣಾಮಗಳನ್ನು ಬೀರಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ನಾವು ಎಲ್ಲಾ ಜನಪ್ರಿಯ ವಿತ್ತೀಯ ನೀತಿಗಳನ್ನು ಅನುಸರಿಸಿದಲ್ಲಿ ಜನತೆಯನ್ನು ನಾವು ಹಣದುಬ್ಬರ ಹೊಡೆತದಿಂದ ರಕ್ಷಿಸಲು ಸಾಧ್ಯವಿಲ್ಲ. ಇಂತಹ ಜನಪ್ರಿಯ ನೀತಿಗಳು ತ್ವರಿತ ಅಥವಾ ನಿಧಾನ ಗತಿಯಲ್ಲಿ ಸುದೀರ್ಘ ಕಾಲದವರೆಗೆ ಉಳಿದುಕೊಂಡರೆ ಪರಿಣಾಮ ಹೂಡಿಕೆಯ ವಾತಾವರಣ ತೀವ್ರ ಹಿನ್ನಡೆ ಕಾಣಬಹುದು ಎಂದು ಶ್ರೇಷ್ಠ ಆರ್ಥಿಕ ತಜ್ಞರೂ ಆಗಿರುವ ಸಿಂಗ್ ಹೇಳಿದ್ದಾರೆ.
ಅಲ್ಲದೆ ಇಂತಹ ಜನಪ್ರಿಯ ವಿತ್ತೀಯ ನೀತಿಗಳನ್ನು ಸರಕಾರ ಅನುಸರಿಸಲು ಮುಂದಾದಲ್ಲಿ ಹೊಸ ಉದ್ಯೋಗ ಸೃಷ್ಟಿಯ ಸಾಮರ್ಥ್ಯಕ್ಕೂ ಕುಂದುಂಟಾಗಬಹುದು. ಬಡ ಜನರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಮರ್ಥ್ಯದ ಪ್ರಮಾಣದಲ್ಲಿ ಕೂಡ ಸರಕಾರಕ್ಕೆ ಹಿನ್ನಡೆಯುಂಟಾಗಬಹುದು. ಹಾಗಾಗಿ ನಾವು ವಾಸ್ತವಾಂಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರಯೇರಿಕೆಯಿಂದ ನೇರ ಪರಿಣಾಮ ಸಗಟು ದರ ಸೂಚ್ಯಂಕದ ಮೇಲೆ ಶೇ.0.40ಕ್ಕಿಂತ ಹೆಚ್ಚಾಗದು ಎಂದು ಅವರು ವಿವರಣೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಮಂಡಿಸಿದ್ದ ಬಜೆಟ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಲು ನಿರ್ಧರಿಸಿದ್ದರು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಸಾಮಾನ್ಯ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಇದನ್ನು ಬಿಜೆಪಿ ಮತ್ತು ಎಡಪಕ್ಷಗಳು ಸೇರಿದಂತೆ ಹೆಚ್ಚಿನ ವಿರೋಧ ಪಕ್ಷಗಳು ವಿರೋಧಿಸಿವೆ. ಯುಪಿಎ ಸರಕಾರದ ಮಿತ್ರಪಕ್ಷಗಳಾದ ತಮಿಳುನಾಡಿನ ಡಿಎಂಕೆ ಮತ್ತು ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ಕೂಡ ಈ ವಿಚಾರದಲ್ಲಿ ಸರಕಾರದ ನಿಲುವನ್ನು ವಿರೋಧಿಸುತ್ತಿವೆ.