ಅವರು ಹೆಣ್ಮಗು ಹೆರೋದೇ ಹಣಕ್ಕಾಗಿ, ನಂತ್ರ ಕೊಂದು ಹಾಕ್ತಾರೆ!
ಜೈಪುರ, ಮಂಗಳವಾರ, 2 ಮಾರ್ಚ್ 2010( 11:10 IST )
ಹೌದು, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಸರಕಾರ ರೂಪಿಸಿದ ಯೋಜನೆಯನ್ನು ಲಾಭ ಪಡೆಯಲು ಇಂತಹದ್ದೊಂದು ದಾರಿಯನ್ನು ದೇಶದ ಹಲವೆಡೆ ಅನುಸರಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಹೆಣ್ಣು ಮಗುವನ್ನು ಹೆತ್ತು, ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡ ಬಳಿಕ ಇದ್ದಕ್ಕಿದ್ದಂತೆ ಮಗು ಕಾಣೆಯಾಗುತ್ತದೆ, ಅರ್ಥಾತ್ ಮಣ್ಣುಪಾಲಾಗುತ್ತದೆ!
ಇದು ರಾಜಸ್ತಾನದ ಜೈಸಲ್ಮೇರ್ ಮತ್ತು ಬಾರ್ಮರ್ ಜಿಲ್ಲೆಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾಮಾನ್ಯ ಸುದ್ದಿ. ಅಲ್ಲೀಗ ಹೆಣ್ಣು ಭ್ರೂಣದ ಹತ್ಯೆ ನಡೆಯುತ್ತಿಲ್ಲ. ಬದಲಿಗೆ ಆಸ್ಪತ್ರೆಗಳಲ್ಲಿ ಹೆಣ್ಣು ಮಗುವನ್ನು ಹೆತ್ತರೆ 1,800 ರೂಪಾಯಿ ಸಿಗುತ್ತದೆ ಎಂಬುದನ್ನು ತಿಳಿದುಕೊಂಡಿರುವ ಕುಟುಂಬಗಳು ಇದರ ಲಾಭವನ್ನು ಪಡೆಯಲು ಯತ್ನಿಸುತ್ತವೆ.
ಮಹಿಳೆ ಆಸ್ಪತ್ರೆಯಲ್ಲಿ ಹೆಣ್ಣು ಮಗಳಿಗೆ ಜನ್ಮ ನೀಡಿದಲ್ಲಿ, ಅಲ್ಲಿ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಮಗುವಿನೊಂದಿಗೆ ಮನೆಗೆ ತೆರಳುತ್ತಾಳೆ. ಕೆಲವೇ ದಿನಗಳಲ್ಲಿ ಆ ಮಗು ಕಣ್ಮರೆಯಾಗುತ್ತದೆ. ಗರ್ಭಿಣಿಯರು ಮತ್ತು ಮಕ್ಕಳನ್ನು ನೋಡಿಕೊಳ್ಳುವ ನರ್ಸ್‌ಗಳಿಗೆ ಈಗೀಗ ಇದು ಅಚ್ಚರಿ ತರುವ ವಿಚಾರವಾಗುತ್ತಿಲ್ಲ, ಏಕೆಂದರೆ ಹೆಣ್ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೊಂದು ಹೂತು ಹಾಕಲಾಗುತ್ತದೆ ಎಂಬುದು ಅವರ ಗಮನಕ್ಕೆ ಬಂದಿದೆ.
'ಖಂಡಿತಾ ಹೆಣ್ಣು ಮಕ್ಕಳನ್ನು ಕೊಂದು ಹಾಕುತ್ತಾರೆ. ಮಕ್ಕಳನ್ನು ಕೊಲ್ಲುವ ಜಾತಿಗಳ ಹೆಸರನ್ನು ಹೇಳಲಾರೆ. ಆದರೆ ಕೆಲವು ಜಾತಿಗಳಲ್ಲಿ ಹೆಣ್ಣು ಮಕ್ಕಳ ಹತ್ಯೆ ನಡೆಯುತ್ತಿರುವುದು ಹೌದು. ಕಳೆದ ಐದು ವರ್ಷಗಳಲ್ಲಿ ಇಂತಹ ಹತ್ತು ಹಲವು ಘಟನೆಗಳು ನಡೆದಿವೆ ಎಂದು 'ಸೀಮಂತ್ ಕಿಸಾನ್ ಸಂಸ್ಥಾನ್' ಎಂಬ ಸಮಾಜ ಸೇವಾ ಸಂಘಟನೆಯನ್ನು ನಡೆಸುತ್ತಿರುವ ನಿಖಾತ್ ಡಿ ದೇತಾ ಹೇಳುತ್ತಾರೆ.
ಜೈಸಲ್ಮೇರ್ ಜಿಲ್ಲೆಯಲ್ಲಿ ಗಂಡು-ಹೆಣ್ಣಿನ ಲಿಂಗ ಅನುಪಾತವೀಗ 1000-869ಕ್ಕೆ ಕುಸಿತ ಕಂಡಿದೆ. ಇದೇ ರೀತಿ ಬಾರ್ಮರ್‌ನಲ್ಲಿಯೂ 1000-919ಕ್ಕೆ ಕುಸಿದಿದೆ. ರಾಷ್ಟ್ರೀಯ ಅನುಪಾತ 1000-933ಕ್ಕಿಂತ ಇವೆರಡೂ ಜಿಲ್ಲೆಗಳು ತೀರಾ ಹಿಂದಿವೆ.
ಕಳೆದ ಎಂಟು ವರ್ಷಗಳಿಂದ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸುಮಾರು 10-12 ಹೆಣ್ಣು ಮಕ್ಕಳನ್ನು ಕೊಂದು ಹಾಕಿರುವುದು ನನ್ನ ಗಮನಕ್ಕೆ ಬಂದಿದೆ. ತೀವ್ರ ಒತ್ತಡ ಎದುರಿಸುವ ಮಗುವಿನ ತಾಯಿ ಮತ್ತು ತಂದೆಯ ಪ್ರಕಾರ ಇದರ ಹಿಂದಿರುವ ಪ್ರಮುಖ ಕಾರಣ ವರದಕ್ಷಿಣೆ ನೀಡಬೇಕಾಗುತ್ತದೆ ಎನ್ನುವುದು ಎಂದು ಮಣಿ ದೇವಿ ಎಂಬ ನರ್ಸ್ ವಿವರಣೆ ನೀಡುತ್ತಾಳೆ.