ಸುಮಾರು 32ರ ಹರೆಯದ ಸುಭಾಷ್ ಕುಮಾರ್ ಎಂಬ ಚಿರಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಈತ 600ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ ಈತ ಕಳ್ಳತನ ಮಾಡುತ್ತಿದ್ದ ಹಣವನ್ನು ತನ್ನೂರಿನ ಅಭಿವೃದ್ಧಿಗೆ, ಹೆಣ್ಮಕ್ಕಳ ಮದುವೆಗೆ ಬಳಸುತ್ತಿರುವುದು!
ಕಳೆದ ಒಂದು ವರ್ಷದ ಅವಧಿಯಲ್ಲಿ ಈತ 600ಕ್ಕೂ ಹೆಚ್ಚು ಕಳ್ಳತನಗಳನ್ನು ನಡೆಸಿದ್ದು, ಸುಮಾರು 15ರಿಂದ 20 ಲಕ್ಷ ರೂಪಾಯಿಗಳಷ್ಟು ಸಂಪಾದಿಸಿದ್ದಾನೆ. ಅವನನ್ನು ಫೆಬ್ರವರಿ 19ರಂದು ದಕ್ಷಿಣ ದೆಹಲಿಯ 'ಪ್ರೆಸ್ ಎನ್‌ಕ್ಲೇವ್' ಸಮೀಪ ಬಂಧಿಸಲಾಯಿತು. ಈ ಸಂದರ್ಭದಲ್ಲಿ ಆರೋಪಿ ಸುಭಾಷ್ ಕೈಯಿಂದ ಐದು ಲಕ್ಷ ರೂಪಾಯಿ ಮೊತ್ತದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಒಂದು ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೈಕಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ಉಲ್ಲಂಘಿಸಿ ಪರಾರಿಯಾಗಲು ಯತ್ನಿಸಿದಾಗ ಬೆನ್ನತ್ತಿ ಸುಭಾಷ್‌ನನ್ನು ಪೊಲೀಸರು ಬಂಧಿಸಿದ ಬಳಿಕ ಆತ ತನ್ನ ಪ್ರತಾಪಗಳನ್ನು ಬಹಿರಂಗಪಡಿಸಿದ್ದ.
ಮಥುರಾದಲ್ಲಿ ರಾಜಕಾರಣದಲ್ಲೂ ಕೈಯಾಡಿಸುತ್ತಿರುವ ಸುಭಾಷ್, ತನ್ನನ್ನು ಆಸ್ತಿ ವ್ಯವಹಾರಗಾರ ಎಂದು ಬಿಂಬಿಸಿಕೊಳ್ಳುತ್ತಿದ್ದ. ಇಲ್ಲಿನ ಖೋಡಾ ಗ್ರಾಮದಲ್ಲಿನ ಪ್ರಧಾನ ಹುದ್ದೆಗಾಗಿ ಮುಂಬರುವ ಚುನಾವಣೆಯಲ್ಲಿ ಆತ ಸ್ಪರ್ಧಿಸಲು ಕೂಡ ಯೋಜನೆ ರೂಪಿಸಿದ್ದ. ಇದೇ ಸಂಬಂಧ ಆತ ತನ್ನ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನೂ ಮಾಡಿಸಿದ್ದ. ಹಲವು ಹೆಣ್ಮಕ್ಕಳ ಮದುವೆಗೆ ಹಣ ನೀಡಿದ್ದಲ್ಲದೆ, ಗಣರಾಜ್ಯೋತ್ಸವದಂದು ಸುಮಾರು 300 ಗ್ರಾಮಸ್ಥರಿಗೆ ಕಂಬಳಿ ಹಂಚಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಹತ್ತು-ಹಲವು ಗರ್ಲ್‌ಫ್ರೆಂಡ್ಸ್‌ಗಳು ಆತನಿಗೆ! ಐಷಾರಾಮಿ ಬದುಕು ಸಾಗಿಸುತ್ತಿದ್ದ ಸುಭಾಷ್ ಸೇವಿಸುವುದು ಕೇವಲ 'ಬ್ಲೂ ಲೇಬಲ್' ಸ್ಕಾಚ್ ವಿಸ್ಕಿಯನ್ನು ಮಾತ್ರ. ಅಲ್ಲದೆ ಐಷಾರಾಮಿ ಹಾಗೂ ದುಬಾರಿಯಾಗಿರುವ ಕಾರು ಮತ್ತು ಬೈಕುಗಳನ್ನು ಬಳಸುತ್ತಾನೆ. ಈ ಸೂಪರ್ ಕಳ್ಳನಿಗೆ ಏಳು ಬೈಕುಗಳಿವೆ. ಆತನಿಗೆ ಹಲವು ಗರ್ಲ್ ಫ್ರೆಂಡ್‌ಗಳಿದ್ದಾರೆ ಎನ್ನುತ್ತಾರೆ ಪೊಲೀಸರು.
ಈ ಹಿಂದೆ 1997ರಲ್ಲಿ ಸಿಲಿಂಡರ್ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ. ಬಳಿಕ 2007ರಲ್ಲಿ ಕೂಡ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ. ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದ ಆತ ಉತ್ತರ ಪ್ರದೇಶದ ಮಥುರಾದಲ್ಲಿ ನೆಲೆಸಿದ್ದ. ದೆಹಲಿಯಲ್ಲಿ ಸುಭಾಷ್ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.