ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರವಾದಿಯವರು ಬುರ್ಖಾ ವಿರೋಧಿ ಎಂದು ಬರೆದಿಲ್ಲ: ತಸ್ಲೀಮಾ
(Karnataka daily | Bangladeshi writer | Taslima Nasreen | Kannada newspaper)
ಬಾಂಗ್ಲಾದೇಶದಿಂದ ಗಡೀಪಾರಿಗೊಳಗಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವನ್ನು ದಿನಪತ್ರಿಕೆಯೊಂದು ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿರುವುದಕ್ಕೆ ಸ್ಪಷ್ಟನೆ ನೀಡಿರುವ ಲೇಖಕಿ, ತಾನು ಯಾವುದೇ ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ; ಪ್ರವಾದಿಯವರು ಬುರ್ಖಾವನ್ನು ವಿರೋಧಿಸಿದ್ದರು ಎಂದೂ ನಾನು ಯಾವುದೇ ಲೇಖನದಲ್ಲೂ ಹೇಳಿಲ್ಲ. ನನ್ನ ಲೇಖನವನ್ನು ತಿರುಚಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
ತನ್ನ ಲೇಖನದಿಂದಾಗಿ ಶಿವಮೊಗ್ಗ ಮತ್ತು ಹಾಸನಗಳಲ್ಲಿ ಭಾರೀ ಹಿಂಸಾಚಾರ ನಡೆದಿದೆ ಎಂಬ ಆರೋಪಗಳಿಗೆ ಉತ್ತರಿಸಿರುವ ಅವರು, 'ನನ್ನ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಸಲಾಗಿದೆ. ಅಲ್ಲದೆ ನನ್ನ ಲೇಖನಗಳನ್ನು ಸಮಾಜದಲ್ಲಿ ಕ್ಷೋಭೆ ಸೃಷ್ಟಿಸಲು ದುರುಪಯೋಗ ಮಾಡಿಕೊಳ್ಳಲಾಗಿದೆ' ಎಂದಿದ್ದಾರೆ.
ತಾನು ಕರ್ನಾಟಕದ ಯಾವುದೇ ಪತ್ರಿಕೆಗೆ ಲೇಖನ ಬರೆದಿಲ್ಲ ಎಂದು ಅವರು ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ಕರ್ನಾಟಕದಲ್ಲಿ ಸೋಮವಾರ ನಡೆದ ಘಟನೆ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ನಾನು ಬರೆದ ಲೇಖನವನ್ನು ಪ್ರಕಟಿಸಿದ್ದೇ ಗಲಭೆಗೆ ಪ್ರಚೋದನೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಆದರೆ ನಾನು ನನ್ನ ಜೀವನದಲ್ಲೇ ಕರ್ನಾಟಕದ ಯಾವುದೇ ಪತ್ರಿಕೆಗೆ ಯಾವುದೇ ಲೇಖನವನ್ನು ಬರೆದಿಲ್ಲ' ಎಂದು ವಿವರಣೆ ನೀಡಿದ್ದಾರೆ.
ಲೇಖನ ಪ್ರಕಟವಾಗಿರುವ ರೀತಿ ಹೇಯವಾಗಿದೆ. ನಾನು ನನ್ನ ಯಾವುದೇ ಬರಹಗಳಲ್ಲಿ ಪ್ರವಾದಿ ಮೊಹಮ್ಮದ್ ಅವರು ಬುರ್ಖಾವನ್ನು ವಿರೋಧಿಸಿದ್ದಾರೆ ಎಂದು ಬರೆದುಕೊಂಡಿಲ್ಲ. ಹಾಗಾಗಿ ಇದು ತಿರುಚಲ್ಪಟ್ಟ ವರದಿಯಾಗಿದೆ. ನನ್ನ ಪ್ರಕಾರ ಇದು ನನ್ನ ಹೆಸರಿಗೆ ಮಸಿ ಬಳಿಯಲು ಮತ್ತು ಸಮಾಜದಲ್ಲಿ ಶಾಂತಿಭಂಗ ಸೃಷ್ಟಿಸಲು ನನ್ನ ಬರಹಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಡೆಸಿರುವ ಯತ್ನ. ಕರ್ನಾಟಕದಲ್ಲಿ ಆದಷ್ಟು ಬೇಗ ಶಾಂತಿ ಮರುಕಳಿಸಲಿ ಎಂದು ನಾನು ಆಶಿಸುತ್ತೇನೆ ಎಂದು ನಸ್ರೀನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಸ್ರೀನ್ ಅವರ ಲೇಖನದ ಅನುವಾದವನ್ನು ರಾಜ್ಯ ಮಟ್ಟದ ಪತ್ರಿಕೆಯೊಂದು ತನ್ನ ಸಾಪ್ತಾಹಿಕ ಪುರವಣಿಯಲ್ಲಿ ಭಾನುವಾರ ಪ್ರಕಟಿಸಿತ್ತು. ಇದನ್ನೇ ಮುಂದಿಟ್ಟುಕೊಂಡ ಮುಸ್ಲಿಂ ಸಮುದಾಯವು ಶಿವಮೊಗ್ಗ ಮತ್ತು ಹಾಸನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಗಲಭೆಯಲ್ಲಿ ತೊಡಗಿದ್ದರು. ಒಂದು ಹಂತದಲ್ಲಿ ಕೈ ಮೀರಿ ಹೋದ ಪರಿಸ್ಥಿತಿಯಿಂದಾಗಿ ಗೋಲಿಬಾರ್ ನಡೆದು ಘಟನೆಯಲ್ಲಿ ಇಬ್ಬರು ಯುವಕರು ಬಲಿಯಾಗಿದ್ದಾರೆ.
ಕಳೆದ ತಿಂಗಳಷ್ಟೇ ಭಾರತಕ್ಕೆ ಹಿಂತಿರುಗಿರುವ ನಸ್ರೀನ್ ಅಜ್ಞಾತ ಸ್ಥಳದಲ್ಲಿ ನೆಲೆಸಿದ್ದು, ತನ್ನ ವೀಸಾವನ್ನು ಈ ವರ್ಷದ ಆಗಸ್ಟ್ ತಿಂಗಳವರೆಗೆ ಆರು ತಿಂಗಳ ಕಾಲ ವಿಸ್ತರಿಸಿಕೊಂಡಿದ್ದಾರೆ.