ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏರ್ ಇಂಡಿಯಾ ಸಿಬ್ಬಂದಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ
(9-year-old girl | Kolkata airport | Reza Ahmed | Binoy Sanyasi)
ವಿಮಾನ ನಿಲ್ದಾಣದ ಸಿಬ್ಬಂದಿಯೇ ಒಂಬತ್ತರ ಹರೆಯದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ಕೊಲ್ಕತ್ತಾದಲ್ಲಿ ನಡೆದಿದ್ದು, ಆತನಿಗೆ ಸಹಕರಿಸಿದ ಸಹೊದ್ಯೋಗಿ ಸೇರಿದಂತೆ ಇಬ್ಬರನ್ನೂ ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಅಪ್ರಾಪ್ತ ಬಾಲಕಿ ತನ್ನ ಸಹೋದರಿ ಮತ್ತು ತಾಯಿಯೊಂದಿಗೆ ಬೋಸ್ಟನ್‌ಗೆ ತೆರಳಲು ಮಂಗಳವಾರ ಮುಂಜಾನೆ ಒಂದು ಗಂಟೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತಮ್ಮ ಬ್ಯಾಗುಗಳೊಂದಿಗೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಏರ್ ಇಂಡಿಯಾಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ರೇಜಾ ಅಹ್ಮದ್ ಎಂಬ ಲಗ್ಗೇಜ್ ಸಾಗಾಟ ನಡೆಸುವ ವ್ಯಕ್ತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕುಟುಂಬವು ದೂರು ನೀಡಿದ ಬಳಿಕ ಅಹ್ಮದ್ ಜತೆ ಕೆಲಸ ಮಾಡುವ ಬಿನೋಯ್ ಸನ್ಯಾಸಿ ಎಂಬ ಏರ್ ಇಂಡಿಯಾ ಉದ್ಯೋಗಿ ಸಮರ್ಥಿಸಲು ಮುಂದಾಗಿದ್ದಾನೆ. ಇವರಿಬ್ಬರನ್ನೂ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಲುಫ್ತಾನ್ಸಾ ವಿಮಾನದಲ್ಲಿ ಫ್ರಾಂಕ್‌ಫರ್ಟ್ ಮೂಲಕ ಬೋಸ್ಟನ್‌ಗೆ ತೆರಳಲು ಈ ಕುಟುಂಬ ಕಾಯುತ್ತಿತ್ತು. ಈ ಸಂದರ್ಭದಲ್ಲಿ ಎಕ್ಸ್-ರೇ ಯಂತ್ರದ ಪಕ್ಕ ನಿಂತಿದ್ದ ಅಹ್ಮದ್ ಬಾಲಕಿಯ ಜತೆ ಅನುಚಿತವಾಗಿ ವರ್ತಿಸಿದ್ದ. ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಬಾಲಕಿಯ ತಾಯಿ ದೂರು ನೀಡಿದ್ದಾರೆ.
ಪೊಲೀಸರು ಅಹ್ಮದ್ ಮತ್ತು ಆತನ ಸಹೋದ್ಯೋಗಿ ಬಿನೋಯ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರನ್ನೂ ಏರ್ ಇಂಡಿಯಾ ಸೇವೆಯಿಂದ ಅಮಾನತುಗೊಳಿಸಿದೆ ಎಂದು ಮೂಲಗಳು ಹೇಳಿವೆ.
ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿ ಮತ್ತು ಆಕೆಯ ತಾಯಿಯ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ಬಾಲಕಿ ಬ್ರಿಟನ್‌ನ ಬೋಸ್ಟನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.