ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ಎಲ್ಲರಿಗೂ ಸೇರಿದ್ದು; ಠಾಕ್ರೆಯೆದುರೇ ಬೋಂಸ್ಲೆ ಸವಾಲು (Mumbai belongs to all | Playback singer | Asha Bhosale | Raj Thackeray)
Bookmark and Share Feedback Print
 
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ಜನಪ್ರಿಯ 'ಮುಂಬೈ' ಘೋಷಣೆಗೆ ಸ್ವತಃ ಅವರೆದುರೇ ಸಡ್ಡು ಹೊಡೆದಿರುವ ಗಾನಕೋಗಿಲೆ ಆಶಾ ಬೋಂಸ್ಲೆ, 'ಮುಂಬೈ ಎಲ್ಲರಿಗೂ ಸೇರಿದ್ದು' ಎಂದು ಸಾರಿದ್ದಾರೆ.

ಮರಾಠಿ ಟೀವಿ ಚಾನೆಲ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ ಠಾಕ್ರೆ ಕೂಡ ಪ್ರೇಕ್ಷಕರಾಗಿ ಭಾಗವಹಿಸಿದ್ದರು. ತನ್ನ ಹುಟ್ಟುಹಬ್ಬದ ಪ್ರಯುಕ್ತ ನಡೆದ ಈ ಸನ್ಮಾನ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬೋಂಸ್ಲೆ, ಮುಂಬೈ ಪ್ರತಿಯೊಬ್ಬ ಭಾರತೀಯನಿಗೂ ಸೇರಿದೆ ಎಂದರು.

ಮುಂಬೈಯಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ದುಡಿಯುವ ಜನರ ಉದ್ಯೋಗವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನರು ಕೂಡ (ಮಹಾರಾಷ್ಟ್ರಿಗರು) ತಾವು ಕಠಿಣ ಶ್ರಮವಹಿಸಲು ಸಿದ್ಧರಿದ್ದೇವೆ ಎಂದು ತೋರಿಸಿಕೊಡಬೇಕಾಗಿದೆ ಎಂದು ನಿರೂಪಕ ಹಾಗೂ ಸಂದರ್ಶನಕಾರ ಸುಧೀರ್ ಗಾಡ್ಗಿ ಕೇಳಿದ ಪ್ರಶ್ನೆಗೆ ಬೋಂಸ್ಲೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ರಾಜ್ ಯಾವುದೇ ಪ್ರತಿಕ್ರಿಯೆಯನ್ನೂ ನೀಡದೆ, ನಂತರ ಬೋಂಸ್ಲೆಯೊಂದಿಗೆ ಕುಶಲೋಪರಿ ಮಾತುಕತೆ ನಡೆಸಿದರು.

ನಾನು ಕೂಡ ಅವಿರತವಾಗಿ ಶ್ರಮವಹಿಸಿದ ಕಾರಣ ನನ್ನಲ್ಲಿ ಇಂದು ಏನು ಇದೆಯೋ ಅದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಮುಂಬೈಯಲ್ಲಿ ದಿನಾರಾತ್ರಿ ಅವಿರತ ಕೆಲಸ ಮಾಡುವವರನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತನ್ನ ಮಾತನ್ನು ಪುನರುಚ್ಛರಿಸಿದ ಬೋಂಸ್ಲೆ, ನಾನು ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಹಾಡಿರುವುದರಿಂದ ತಾನು ಇಡೀ ಭಾರತಕ್ಕೆ ಸೇರಿದವಳು. ಆದರೆ ಮಹಾರಾಷ್ಟ್ರಿಗಳಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದರು.

ಮುಂಬೈಯಲ್ಲಿರುವ ಉತ್ತರ ಭಾರತದ ಟ್ಯಾಕ್ಸಿ ಚಾಲಕರು ಮರಾಠಿಯನ್ನು ಕಲಿಯಬೇಕು ಎಂದು ಹೇಳುತ್ತಾ ಬಂದಿರುವ ರಾಜ್ ಠಾಕ್ರೆಗೆ ತಿರುಗೇಟು ನೀಡಿದ ಅವರು, 'ನನ್ನ ಮರಾಠಿ ಚೆನ್ನಾಗಿಲ್ಲ. ಆದರೆ ನಾನು ಕಲಿಯುತ್ತಿದ್ದೇನೆ. ನಾನು ಹೆಚ್ಚಾಗಿ ಹಿಂದಿ ಮಾತನಾಡುತ್ತೇನೆ. ಇದೇ ನನಗೆ ಹೆಚ್ಚು ಸೂಕ್ತವೆನಿಸುತ್ತದೆ' ಎಂದರು.

ಇತ್ತೀಚಿನ ದಿನಗಳಲ್ಲಿ ರಾಜ್ ಠಾಕ್ರೆಯ 'ಮುಂಬೈ ಕೇವಲ ಮರಾಠಿಗರಿಗೆ ಸೇರಿದ್ದು' ಎಂಬ ಘೋಷಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಾರೂಖ್ ಖಾನ್, ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ ಸೇರಿದಂತೆ ಹಲವರು ಈಗಾಗಲೇ ಠಾಕ್ರೆ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಸಾಲಿಗೀಗ ಬೋಂಸ್ಲೆ ಸೇರ್ಪಡೆಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ