ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆ ಜಾಗೃತಿ ಮೂಡಿಸಲು ಪ್ರತಿಪಕ್ಷ ವಿಫಲ: ಮುಲಾಯಂ
(Opposition to blame | price rise | Samajwadi Party | Mulayam Singh Yadav)
ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಫಲವಾಗಿರುವುದಕ್ಕೆ ವಿರೋಧಪಕ್ಷವೇ ಹೊಣೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮಂಗಳವಾರ ಹೇಳಿದ್ದಾರೆ.
ಬೆಲೆ ಏರಿಕೆ ವಿರುದ್ಧ ಜನತೆ ತಮ್ಮ ಪ್ರತಿಭಟನೆ ನಡೆಸದೇ ಇರುವುದು ತೀರಾ ಗಂಭೀರ ವಿಚಾರವಾಗಿದೆ. ಆದರೆ ಈ ವಿಚಾರದಲ್ಲಿ ಚಳವಳಿ ನಡೆಸುವ ಮೂಲಕ ಜಾಗೃತಿ ಮೂಡಿಸಲು ವಿಫಲವಾಗಿರುವ ವಿರೋಧ ಪಕ್ಷಗಳ ನಾಯಕರು ಕೂಡ ಇದಕ್ಕೆ ಹೊಣೆಗಾರರು ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ಪ್ರತಿಪಕ್ಷಗಳನ್ನು ಹೆಸರಿಸದೇ ಇದ್ದರೂ, ಅವರ ಗುರಿ ಬಿಜೆಪಿಯಾಗಿದ್ದದ್ದು ಸ್ಪಷ್ಟವಾಗಿತ್ತು. ಇತ್ತೀಚೆಗಷ್ಟೇ ಪ್ರತಿಪಕ್ಷಗಳು ಬೆಲೆಯೇರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸಿವೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ದೇಶವನ್ನೂ ಯಾವತ್ತೂ ಸಂಕಷ್ಟಕ್ಕೆ ದೂಡುತ್ತಲೇ ಬಂದಿದೆ. ಒಂದಿಲ್ಲೊಂದು ಅವಘಢಗಳನ್ನು ಅದು ಅಧಿಕಾರವಧಿಯಲ್ಲಿ ನಡೆಸುತ್ತದೆ ಎಂದು ಇದೇ ಸಂದರ್ಭದಲ್ಲಿ ಮುಲಾಯಂ ಆರೋಪಿಸಿದರು.
ನಾಳೆ ಸಂಸತ್ತಿನಲ್ಲಿ ಬಜೆಟ್ ಕುರಿತ ಚರ್ಚೆ ನಡೆಯುವಾಗ ಈ ಅಪಾಯಗಳ ಬಗ್ಗೆ ನಾನು ವಿವರಿಸುತ್ತೇನೆ. ಆಗ ವಾಸ್ತವ ಏನೆಂಬುದು ಬಯಲಿಗೆ ಬರಲಿದೆ ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೆಟ್ಟ ನೀತಿಗಳೇ ಬೆಲೆ ಏರಿಕೆಗೆ ಕಾರಣ. ಇದೇ ಕಾರಣದಿಂದ ಆಡಳಿತ ಯಂತ್ರ ಕೆಟ್ಟು ಹೋಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಶೇ.80ರಷ್ಟು ದೇಶವಾಸಿಗಳಿಗೆ ಹಬ್ಬವು ಈ ಬಾರಿ ಬಣ್ಣರಹಿತವಾಗಿದೆ. ಇದಕ್ಕೆ ಕಾರಣ ಬೆಲೆ ಏರಿಕೆ. ಆದರೆ ಕಾಂಗ್ರೆಸ್ ಸರಕಾರವು ಈ ಕುರಿತು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಎಂದರು.