ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತೀಯರ ಮೇಲಿನ ದಾಳಿಯನ್ನು ಸಹಿಸುವುದಿಲ್ಲ: ಆಸ್ಟ್ರೇಲಿಯಾ
(Zero tolerance | assaults on Indians | Australia | Stephen Smith)
ಬುಧವಾರ ನಡೆಯಲಿರುವ ಮಾತುಕತೆಗೂ ಮೊದಲು ಹೇಳಿಕೆ ನೀಡಿರುವ ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಸ್ಟೀಫನ್ ಸ್ಮಿತ್, ಭಾರತೀಯರ ಮೇಲೆ ತನ್ನ ದೇಶದಲ್ಲಿ ನಡೆಯುವ ಯಾವುದೇ ದಾಳಿಗಳನ್ನು ದೇಶ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನವದೆಹಲಿಗೆ ಆಗಮಿಸಿರುವ ಅವರು ಭಾರತೀಯರ ಮೇಲಿನ ದಾಳಿಗಳನ್ನು ಉಲ್ಲೇಖಿಸುತ್ತಾ, ಆಸ್ಟ್ರೇಲಿಯಾಕ್ಕೆ ಆಗಮಿಸುವ ಭಾರತೀಯರು ಸೇರಿದಂತೆ ಯಾರ ಮೇಲಿನ ದಾಳಿಯನ್ನೂ ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಆದರೆ ಸಚಿವರು ಇತ್ತ ಹೇಳಿಕೆ ನೀಡುತ್ತಿರುವಂತೆಯೇ ಅವರ ತವರಿನಲ್ಲಿ ಶ್ರೀಲಂಕಾ-ಭಾರತದ ದಂಪತಿ ಮೇಲೆ ಹಲ್ಲೆ ನಡೆದ ವರದಿ ಭಾರೀ ವಿವಾದವನ್ನೆಬ್ಬಿಸಿತ್ತು.
ಖಂಡಿತಾ ದಾಳಿಗಳು ವಿಷಾದನೀಯ. ನಮ್ಮಲ್ಲಿ ಕೆಲವು ಜನಾಂಗೀಯ ದಾಳಿಗಳು ಅಥವಾ ವರ್ಣೀಯ ಹಿಂಸಾಚಾರಗಳು ನಡೆಯುತ್ತಿವೆ ಎಂಬುದರ ಬಗ್ಗೆ ನಾನು ನಮ್ಮ ಸಂಸತ್ತಿಗೆ ಹೇಳಿದ್ದೇನೆ. ಇವೆಲ್ಲವನ್ನೂ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸ್ಟೀಫನ್ ತಿಳಿಸಿದ್ದಾರೆ.
ತನ್ನ ದೇಶಕ್ಕೆ ಭೇಟಿ ನೀಡುವ ಜನರು ಸಂತೋಷ ಮತ್ತು ಸುರಕ್ಷಿತವಾದ ಅನುಭವ ಪಡೆಯಲು ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸಚಿವರು ವಿವರಣೆ ನೀಡಿದರು.
ನಾಳೆ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಸ್ಟೀಫನ್ ಮಾತುಕತೆ ನಡೆಸಲಿದ್ದು, ಭಾರತೀಯರ ಮೇಲೆ ಆ ದೇಶದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.
ಕೃಷ್ಣ ಮತ್ತು ಸ್ಮಿತ್ ಅವರು ನಮ್ಮ ತೀವ್ರ ಕಳವಳಕ್ಕೆ ಕಾರಣವಾಗಿರುವ ಸುರಕ್ಷತೆ, ಭದ್ರತೆ ಮತ್ತು ಭಾರತೀಯರ ಒಳಿತು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ತಿಳಿಸಿದ್ದಾರೆ.