ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಮಾತೃಭೂಮಿ ಭಾರತಕ್ಕೆ ಬೇಡವಾಗಿದ್ದೇನೆ: ಎಂ.ಎಫ್. ಹುಸೇನ್ (I love India | MF Husain | Gulf Madhyamam | Qatar citizenship)
Bookmark and Share Feedback Print
 
ಮೂಲಭೂತವಾದಿ ಸಂಘಟನೆಗಳು ನನ್ನನ್ನು ಗುರಿ ಮಾಡಿದಾಗ ರಾಜಕೀಯ ನಾಯಕರು, ಬುದ್ಧಿಜೀವಿಗಳು ಮತ್ತು ಕಲಾವಿದರು ಸುಮ್ಮನಿದ್ದರು ಎಂದು ತನ್ನ ನೋವನ್ನು ತೋಡಿಕೊಂಡಿರುವ ವಿವಾದಿತ ಕಲಾವಿದ ಎಂ.ಎಫ್. ಹುಸೇನ್, ಭಾರತವನ್ನು ನಾನು ಈಗಲೂ ಪ್ರೀತಿಸುತ್ತಿದ್ದೇನೆ; ಆದರೆ ಆ ದೇಶಕ್ಕೆ ಈಗ ನನ್ನ ಅಗತ್ಯವಿಲ್ಲ ಎಂದಿದ್ದಾರೆ.

ಭಾರತ ನನ್ನ ಜನ್ಮಭೂಮಿ. ಯಾವತ್ತೂ ತಾಯ್ನಾಡನ್ನು ದ್ವೇಷಿಸಲಾರೆ. ಆದರೆ ಭಾರತ ನನ್ನನ್ನು ತಿರಸ್ಕರಿಸಿದೆ. ಇಷ್ಟಾದ ಮೇಲೂ ನಾನು ಭಾರತದಲ್ಲಿ ಯಾಕೆ ಉಳಿಯಬೇಕು ಎಂದು ಕತಾರ್ ಪೌರತ್ವವನ್ನು ಸ್ವೀಕರಿಸಿದ ನಂತರ ಮೊತ್ತ ಮೊದಲ ಬಾರಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಕೇರಳ ಮೂಲದ ಮಲಯಾಳಂ ದಿನಪತ್ರಿಕೆ 'ಮಾಧ್ಯಮಂ' ಸಮೂಹದ ದೋಹಾ ಆವೃತ್ತಿ 'ಗಲ್ಫ್ ಮಾಧ್ಯಮಂ' ಪತ್ರಿಕೆಯು ಹುಸೇನ್ ಸಂದರ್ಶನವನ್ನು ಪ್ರಕಟಿಸಿದೆ.

ಸಂಘ ಪರಿವಾರ ಸಂಘಟನೆಗಳು ನನ್ನನ್ನು ಗುರಿ ಮಾಡಿದ್ದ ಹೊತ್ತಿನಲ್ಲಿ ಎಲ್ಲರೂ ಮೌನವಾಗಿದ್ದರು. ರಾಜಕೀಯ ನಾಯಕರು, ಕಲಾವಿದರು ಅಥವಾ ಬುದ್ಧಿಜೀವಿಗಳು ಸೇರಿದಂತೆ ಯಾರೊಬ್ಬರೂ ನನ್ನ ಬಳಿ ಬಂದು ಮಾತುಕತೆ ನಡೆಸಿಲ್ಲ. ಆದರೆ ಭಾರತದ ಶೇ.90ರಷ್ಟು ಮಂದಿ ನನ್ನನ್ನು ಪ್ರೀತಿಸುತ್ತಿದ್ದಾರೆಂಬ ವಾಸ್ತವ ನನಗೆ ಗೊತ್ತಿದೆ. ಅವರೆಲ್ಲರೂ ನನ್ನೊಂದಿಗಿದ್ದಾರೆ. ಕೆಲವು ರಾಜಕಾರಣಿಗಳೂ ಸೇರಿದಂತೆ ಕೇವಲ ಶೇ.10ರಷ್ಟು ಮಂದಿ ಮಾತ್ರ ನನ್ನ ವಿರುದ್ಧವಿದ್ದಾರೆ ಎಂದು ಹುಸೇನ್ ಹೇಳಿದ್ದಾರೆ.

ಹಿಂದೂ ದೇವತೆಗಳ ವಿಕೃತ ಚಿತ್ರಗಳನ್ನು ಬಿಡಿಸಿದ್ದಾರೆ ಎಂದು ಆರೋಪಿಸಿ ಭಾರತದ ಹಲವು ನ್ಯಾಯಾಲಯಗಳಲ್ಲಿ ಹುಸೇನ್ ವಿರುದ್ಧ ನೂರಾರು ಪ್ರಕರಣಗಳು ದಾಖಲಾದ ಬಳಿಕ ಅವರು 2006ರಿಂದ ಸ್ವಯಂ ಗಡೀಪಾರುಗೊಂಡು ವಿದೇಶಗಳಲ್ಲಿ ನೆಲೆಸಿದ್ದರು.

ವಿಶ್ವದಾದ್ಯಂತದ ಜನ ನನ್ನನ್ನು ಪ್ರೀತಿಸುತ್ತಿರುವುದರಿಂದ ನನಗೆ ಯಾವುದೇ ಭೀತಿಯಿಲ್ಲ. ಭಾರತದಲ್ಲಿನ ಸರಕಾರಗಳಿಗೆ ನನಗೆ ರಕ್ಷಣೆ ನೀಡುವುದು ಸಾಧ್ಯವಾಗಿಲ್ಲ. ಹಾಗಾಗಿ ಅಂತಹ ದೇಶದಲ್ಲಿ ನಾನು ವಾಸಿಸುವುದು ತುಂಬಾ ಕಷ್ಟ. ರಾಜಕಾರಣಿಗಳು ಕೇವಲ ಓಟುಗಳತ್ತ ಮಾತ್ರ ಕಣ್ಣು ನೆಟ್ಟಿದ್ದಾರೆ ಎಂದು ಸಂದರ್ಶನದುದ್ದಕ್ಕೂ ರಾಜಕಾರಣಿಗಳ ವಿರುದ್ಧ ಹುಸೇನ್ ಪ್ರಹಾರ ನಡೆಸಿದ್ದಾರೆ.

ಈಗ ಅವರು ನನ್ನನ್ನು ವಾಪಸಾಗುವಂತೆ ಹೇಳುತ್ತಿದ್ದಾರೆ. ನಾನು ದೇಶದಿಂದ ಹೊರಗಿದ್ದಾಗ ಯಾರೊಬ್ಬರೂ ನನ್ನನ್ನು ಕಂಡು ಮಾತನಾಡಿಸಿರಲಿಲ್ಲ. ಯಾವುದೇ ಸರಕಾರವು ನನ್ನನ್ನು ಮರಳುವಂತೆ ಹೇಳಿರಲಿಲ್ಲ. ಆದರೆ ನನಗೆ ಬೇರೊಂದು ದೇಶವು ಪೌರತ್ವ ನೀಡಲು ಮುಂದಾದಾಗ ಅವರು ದೇಶಕ್ಕೆ ಮರಳುವಂತೆ ಹೇಳುತ್ತಿದ್ದಾರೆ. ನನ್ನನ್ನು ರಕ್ಷಿಸಲು ಹಿಂದೇಟು ಹಾಕಿದ ರಾಜಕೀಯ ನಾಯಕತ್ವವನ್ನು ನಾನು ಈಗ ಹೇಗೆ ನಂಬಲಿ? ನನಗೆ ಭಾರತದಲ್ಲಿ ಸೂಕ್ತ ಭದ್ರತೆ ನೀಡುತ್ತಾರೆ ಎಂಬುದರ ಬಗ್ಗೆ ಏನು ಭರವಸೆಯಿದೆ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ನನ್ನ ಮೇಲೆ ದಾಖಲಾಗಿರುವ ಪ್ರಕರಣಗಳಿಂದಾಗಿ ಕಲಾವಿದನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗಿದ್ದು, ನಾನು ಯಾವತ್ತೂ ಯಾರದೇ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲು ಬಯಸಿರಲಿಲ್ಲ. ಕಲೆ ಮೂಲಕ ನನ್ನ ಆತ್ಮದ ಕ್ರಿಯಾಶೀಲತೆಯನ್ನು ನಾನು ಹೊರಗೆಡವಿದ್ದೇನೆ. ಕಲೆಯೆನ್ನುವುದು ಸಾರ್ವತ್ರಿಕ ಭಾಷೆ ಎಂದು ಹುಸೇನ್ ತಿಳಿಸಿದ್ದಾರೆ.

ನಾನೀಗ ಕತಾರ್ ಪೌರತ್ವದೊಂದಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ. ಈಗ ನನ್ನ ನೆಲೆ ಕತಾರ್. ಇಲ್ಲಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ನಿಯಂತ್ರಿಸುತ್ತಿಲ್ಲ. ಇಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ. ಸಾಧ್ಯವಾದರೆ, ಅವಕಾಶ ಸಿಕ್ಕಿದರೆ ಭಾರತಕ್ಕೆ ಭೇಟಿ ನೀಡಲು ಯತ್ನಿಸುತ್ತೇನೆ ಎಂದು ಸಂದರ್ಶನದ ಕೊನೆಯಲ್ಲಿ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ